ಮೈಸೂರು: ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್ (African Spain fever) ಕಾಣಿಸಿಕೊಂಡ ಹಿನ್ನೆಲೆ ತಹಶೀಲ್ದಾರ್ ಸಣ್ಣ ರಾಮಪ್ಪ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ ರವಿಕುಮಾರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ ಪ್ರಸನ್ನ ಮತ್ತು ತಂಡ ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ ಪ್ರಸನ್ನ, 'ಆಫ್ರಿಕನ್ ಸ್ಟೈನ್ ಫೀವರ್ ಆಗಸ್ಟ್ ಮೊದಲ ವಾರ ಕೇರಳದಲ್ಲಿ ಪತ್ತೆಯಾಗಿದೆ. ಹಂದಿಗಳಲ್ಲಿ ಜ್ವರ, ಮುಖ ಮತ್ತು ದೇಹದಲ್ಲಿ ಕೆಪ್ಪು ಬಣ್ಣದ ಗುಳ್ಳೆಗಳು, ಬಾಯಿಯಲ್ಲಿ ಜೊಲ್ಲು ಸುರಿಯುವುದು, ವಾಂತಿ, ಬೇಧಿಯಾಗುವುದು ರೋಗದ ಪ್ರಮುಖ ಲಕ್ಷಣ. ಈ ರೋಗ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಯಾವುದೇ ಕಾರಣಕ್ಕೂ ಮನುಷ್ಯರಿಗೆ ಹರಡುವುದಿಲ್ಲ' ಎಂದು ತಿಳಿಸಿದರು.
ಬಾವಲಿ ಚೆಕ್ ಪೋಸ್ಟ್‌ಗೆ ಅಧಿಕಾರಿಗಳ ಭೇಟಿ, ಪರಿಶೀಲನೆ ಆಫ್ರಿಕನ್ ಸ್ಟೈನ್ ಫೀವರ್ ಮಾರಣಾಂತಿಕ ಕಾಯಿಲೆ. ಇದಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಕೇರಳದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಾಗೂ ಜ್ವರ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಬಿ ಕುಪ್ಪೆ ಮತ್ತು ಬಾವಲಿ ಸುತ್ತ ಮುತ್ತಲಿನ ಗ್ರಾಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದರು.
ಹಂದಿ ಮಾಂಸ ಮಾರಾಟ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ:ತಹಶೀಲ್ದಾರ್ ಸಣ್ಣರಾಮಪ್ಪ ಮಾತನಾಡಿ, 'ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ 2 ತಂಡವನ್ನು ರಚನೆ ಮಾಡಲಾಗಿದೆ. ಒಂದು ತಂಡ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಇನ್ನೊಂದು ತಂಡ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ತನಕ ಕರ್ತವ್ಯ ನಿರ್ವಹಿಸಬೇಕು' ಎಂದರು. ಕೇರಳದಿಂದ ಪ್ರಾಣಿಗಳ ಸಾಗಣೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ ಮಾಂಸ ಮಾರಾಟವನ್ನು ಸಹ ಸಂಪೂರ್ಣವಾಗಿ ನಿಷೇಧಿಸಿ ಇದರ ಬಗ್ಗೆ ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮವಹಿಸಲು ಸೂಚಿಸಲಾಗಿದೆ ಎಂದರು. ಜತೆಗೆ ಇದೇ ಸಂದರ್ಭದಲ್ಲಿ ಹಂದಿ ಮಾಂಸ ಮಾರಾಟ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಜನರಿಗೆ ಯಾವುದೇ ಜ್ವರ ಕಾಣಿಸಿಕೊಂಡರು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಮಾಡಿ ಜನರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಶಿಕ್ಷಣ ನೀಡಿ ಮಾಹಿತಿಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ರಾಘವೇಂದ್ರ, ಆರೋಗ್ಯ ಇಲಾಖೆ ರವಿರಾಜ್, ವನಸಿರಿ ಉಮೇಶ್, ರವಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ, ಏವಿಯನ್ ಇನ್‌ಫ್ಲುಯೆಂಜಾ ಪತ್ತೆ: ಸೋಂಕಿತ ಪ್ರದೇಶವೆಂದು ಘೋಷಣೆ