ಮೈಸೂರು: ಕೊರೊನಾ ವೈರಸ್ ಹರಡದಂತೆ ಕೆಲವು ಹಳ್ಳಿಗಳಲ್ಲಿ ಹೊರಗಿನವರಿಗೆ ನಿರ್ಬಂಧ ವಿಧಿಸಿರುವ ರೀತಿಯಲ್ಲಿ ಆದಿವಾಸಿಗಳೂ ಸ್ವಯಂ ಪ್ರೇರಿತವಾಗಿ ಎಚ್ಚೆತ್ತುಕೊಂಡು ಹಾಡಿಗಳಿಗೆ ಯಾರೂ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 120 ಹಾಡಿಗಳಿವೆ. ಇವುಗಳ ಪೈಕಿ ಇಲ್ಲಿನ 80 ಹಾಡಿಗಳ ನಿವಾಸಿಗಳು ಸ್ವಯಂ ಪ್ರೇರಿತರಾಗಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಬಸವನಗಿರಿ ಹಾಡಿ, ಬಸವನಗಿರಿ ಎ ಹಾಡಿ, ಲಕ್ಷ್ಮಿಪುರ ಹಾಡಿ, ಬ್ರಹ್ಮಗಿರಿ ಹಾಡಿ, ಬಳ್ಳೆ ಹಾಡಿ ಸೇರಿದಂತೆ 80 ಹಾಡಿಗಳಲ್ಲಿ, ಬೇರೆ ಹಾಡಿಗಳಿಂದ ಬರುವ ಆದಿವಾಸಿಗಳಿಗೂ ಕೂಡ ನೋ ಎಂಟ್ರಿ. ಸರ್ಕಾರ ನೀಡಿದ ಎರಡು ತಿಂಗಳ ಪಡಿತರದಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದು, ಈಗ ಮತ್ತೆ ಸರ್ಕಾರ ಪಡಿತರ ವಿತರಣೆ ಮಾಡಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಆದಿವಾಸಿಗಳು.