ಮೈಸೂರು :ಹಳ್ಳದಲ್ಲಿರುವ ಅನೈರ್ಮಲ್ಯ ನೀರನ್ನು ಅಡುಗೆ ಹಾಗೂ ಕುಡಿಯಲು ಬಳಸಿಕೊಂಡು ನೀರಿಗಾಗಿ ಪರಿತಪಿಸುತ್ತಿರುವ ಆದಿವಾಸಿಗಳ ಗೋಳು ಹೇಳತೀರದು. ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳೂರು ಹಾಡಿಯಲ್ಲಿ ಕುಡಿಯುವ ನೀರಿನ ಮೋಟಾರ್ ಪಂಪ್ ಕೆಟ್ಟು ಒಂದು ತಿಂಗಳಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇದರಿಂದ ಆದಿವಾಸಿಗಳು ನೀರಿಗಾಗಿ ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.
ಕಾಡಿನಲ್ಲಿ ಇದ್ದುಕೊಂಡು ಜೀವನ ನಡೆಸುತ್ತಿರುವ ಈ ಆದಿವಾಸಿಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲ. ಮಳೆ, ಚಳಿ, ಬಿಸಿಲಿನಿಂದ ಪಾರಾಗಲು ತಲೆ ಮೇಲೊಂದು ಸೂರು ಇಲ್ಲ. ಕನಿಷ್ಠ ಜೀವ ಉಳಿಸಿಕೊಳ್ಳಲು ಕುಡಿಯಲು ನೀರು ಸಿಗದೇ ಆದಿವಾಸಿ ಜನರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಕುಡಿಯಲು ನೀರಿಲ್ಲದೇ ಕಾಡಿನ ಗುಂಡಿಗಳಲ್ಲಿ ನಿಂತ ಕಲುಷಿತ ನೀರು ಕುಡಿದು ಆದಿವಾಸಿಗಳು ಬದುಕುವಂತಾಗಿದೆ.
ಆದಿವಾಸಿಗಳ ಕಷ್ಟ ಕೇಳೋರಾರು?:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡುಪ್ರಾಣಿಗಳು ಕುಡಿಯುವ ಗುಂಡಿ ನೀರನ್ನೇ ಈ ಜನರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಗುಂಡಿ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರು ಕುಡಿದು ಗಂಟಲು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಗಂಟಲು ನೋವಿಗೆ ಕುತ್ತಿಗೆ ಭಾಗಕ್ಕೆ ಮಣ್ಣು ಸವರಿಕೊಳ್ಳುತ್ತಿರುವ ಮಂದಿ, ವೈದ್ಯರಿಲ್ಲ, ಔಷಧಿಯ ವ್ಯವಸ್ಥೆಯೂ ಇಲ್ಲದೇ ಪರಿತಪಿಸುತ್ತಿದ್ದಾರೆ. ಬೇಜಾವ್ದಾರಿಯಿಂದ ನಡೆದುಕೊಳ್ಳುತ್ತಿರುವ ತಾಲೂಕು ಆಡಳಿತ ಹಾಗೂ ಸರ್ಕಾರ ವಿರುದ್ಧ ಆದಿವಾಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.