ಮೈಸೂರು: ಕಾವೇರಿ ಉಳಿವಿಗಾಗಿ ನಾವು ಹೋರಾಟಕ್ಕೆ ಧುಮುಕಲು ಸಿದ್ಧ. ಈ ಬಗ್ಗೆ ನಮಗೆ ಕನ್ನಡ ಮೂವಿ ಅಸೋಸಿಯೇಷನ್ನಿಂದ ಕರೆ ಬರುತ್ತದೆ. ಅಲ್ಲಿ ಎಲ್ಲರೂ ಸೇರಿ ಏನು ಮಾಡಬೇಕೆಂದು ರೂಪುರೇಷೆಯನ್ನು ಮಾಡುತ್ತಾರೆ. ಆ ದಿನಗಳಿಗಾಗಿ ಕಾಯುತ್ತಿದ್ದೇವೆ ಎಂದು ಚಿತ್ರನಟ ರಾಘವೇಂದ್ರ ರಾಜಕುಮಾರ್ ಹೇಳಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ನೆಲ, ಜಲಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ಹೇಳಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಮತ್ತು ಸಿನಿಮಾ ಇಂಡಸ್ಟ್ರಿ ಇದಕ್ಕೆ ಭದ್ರವಾಗಿ ನಿಲ್ಲುತ್ತೇವೆ ಎಂದು ಘೋಷಿಸಿದರು.
ಜನರು ಎಲ್ಲೆಲ್ಲಿ ಕರೆಯುತ್ತಾರೆ ಅಲ್ಲಿಗೆ ಹೋಗಬೇಕು, ಯಾಕೆಂದರೆ ನಾವು ಇರುವುದು ಬರೀ ಸಿನಿಮಾ ತೋರಿಸಲಿಕ್ಕಲ್ಲ. ಜಲಕ್ಕೆ, ಜನಕ್ಕೆ, ಭಾಷೆಗೆ ಕಷ್ಟ ಬಂದಾಗ ನಾವು ಹೋರಾಟಕ್ಕೆ ಹೋಗಲೇಬೇಕು. ಆ ದಿನಗಳು ಹತ್ತಿರ ಬಂದಾಗ ನಮಗೆ ಕರೆ ಬರುತ್ತದೆ ಆಗ ನಾವೆಲ್ಲರೂ ಬರುತ್ತೇವೆ. ಕಾವೇರಿ ಹೋರಾಟಕ್ಕೆ ನಾವು ಹೋಗುವುದು ನಮ್ಮ ಧರ್ಮ. ಕನ್ನಡ ಮೂವಿ ಅಸೋಸಿಯೇಷನ್ನಲ್ಲಿ ಈ ಬಗ್ಗೆ ಯಾವುದು ನಿರ್ಧಾರವಾಗಿಲ್ಲ. ರೈತರಿಂದ ಅಸೋಸಿಯೇಷನ್ಗೆ ಕರೆ ಬರುತ್ತದೆ. ಆಗ ನಮ್ಮ ಜೊತೆ ಕುಳಿತುಕೊಂಡು ಮಾತನಾಡುತ್ತಾರೆ ಎಂದು ತಿಳಿಸಿದರು.
ಕಾವೇರಿ ವಿವಾದದ ಬಗ್ಗೆ ಮೊದಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತದೆ, ಆನಂತರ ವಿವಿಧ ಸಂಘಟನೆಗಳು ನಾವು ಬರುತ್ತೇವೆ. ಬಬ್ಬರೇ ಎಲ್ಲಾ ಕಲಾವಿದರ ಪರವಾಗಿ ರೈತರಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಬಾರದು. ಹಿಂದೆ ರಾಜಕುಮಾರ್ ಅವರು ಹೋರಾಟಕ್ಕೆ ನಿಲ್ಲುತ್ತಿದ್ದರು. ಅವರ ಪರವಾಗಿ ಇಡೀ ಸಿನಿಮಾ ರಂಗವೇ ನಿಲ್ಲುತ್ತಿತ್ತು. ಅವರ ಜಾಗವನ್ನು ಯಾರು ತುಂಬಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಹೋರಾಟಕ್ಕೆ ಬರುತ್ತೇವೆ ಎಂದರು.
ಇದನ್ನೂ ಓದಿ:ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಂಸದರ ಬೆಂಬಲ ಸಿಕ್ಕಿದೆ; ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇದೆ: ಡಿ.ಕೆ.ಶಿವಕುಮಾರ್
ಕುಡಿಯುವ ನೀರಿಗಾಗಿ ಜೈಲಿಗೆ ಹೋಗಲೂ ರೆಡಿ - ಮುಖ್ಯಮಂತ್ರಿ ಚಂದ್ರು:ಮತ್ತೊಂದೆಡೆ, ಬೆಂಗಳೂರಿನಲ್ಲಿ ಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಮ್ಮಲ್ಲಿ ಬರಗಾಲವಿದೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಇದಕ್ಕಾಗಿ ಜೈಲಿಗೆ ಹೋದರೂ ರಾಜ್ಯದ ಹಿತಕ್ಕಾಗಿ ಹೋದಂತಾಗುತ್ತದೆ. ಆದ್ದರಿಂದ ಅಲ್ಲಿಗೆ ಹೋಗಲೂ ರೆಡಿ. ಕಾವೇರಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಇದೆ. ಈ ಸಮಸ್ಯೆಗೆ ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯೇ ಕಾರಣವಾಗಿದೆ. ರಾಜ್ಯಕ್ಕೆ ನೀರಿಲ್ಲ, ತಮಿಳುನಾಡಿಗೆ ಬಿಡಲು ಹೇಗೆ ಸಾಧ್ಯ? ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ. ಮುಂದೆ ಏನೇ ಬಂದರೂ ಎದುರಿಸಲಿ, ನಾವೂ ಜೊತೆಗೆ ಇರುತ್ತೇವೆ ಎಂದರು.