ಮೈಸೂರು:ಪಿರಿಯಾಪಟ್ಟಣ ತಾಲೂಕಿನ ಆದಿವಾಸಿಗೆ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ನಟ ಚೇತನ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಣ್ಯಾಧಿಕಾರಿಗಳು ಆದಿವಾಸಿಗಳ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಗುಂಡೇಟು ತಿಂದ ಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಕಾರಣಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದರು.
ಆದಿವಾಸಿ ಮೇಲೆ ಗುಂಡು ಹಾರಿಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ನಟ ಚೇತನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದು, ಆದಿವಾಸಿಗಳು ನೀಡಿರುವ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರು ಕೂಡಲೇ ಆದಿವಾಸಿಗಳ ದೂರನ್ನು ದಾಖಲಿಸಿಕೊಂಡು ವಸ್ತುನಿಷ್ಠವಾಗಿ ತನಿಖೆ ಮಾಡಬೇಕು. ಅರಣ್ಯಾಧಿಕಾರಿ ತಪ್ಪು ಮಾಡಿದ್ದರೆ, ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಅರಣ್ಯ ಇಲಾಖೆ ಮೇಲೆ FIR ದಾಖಲಿಸಿ ನಿಷ್ಪಕ್ಷಪಾತ ತನಿಖೆಯಾಗದಿದ್ದರೆ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಆದಿವಾಸಿ ಯುವಕನ ನ್ಯಾಯಕ್ಕಾಗಿ ರೈತ ಸಂಘ, ಮಹಿಳಾ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೃಹತ್ ಹೋರಾಟ ನಡೆಸಲಿವೆ ಎಂದು ನಟ ಚೇತನ್ ಎಚ್ಚರಿಸಿದರು.
ಇದನ್ನೂ ಓದಿ:ಆದಿವಾಸಿ ಮೇಲೆ ಗುಂಡಿನ ದಾಳಿ ಪ್ರಕರಣ: ಸೂಕ್ತ ತನಿಖೆಗೆ ಆಗ್ರಹ