ಮೈಸೂರು: ನಂಜನಗೂಡಿನಲ್ಲಿ ಮಹಿಳೆಯ ನಿಗೂಢ ಕೊಲೆ ಪ್ರಕರಣದ ರಹಸ್ಯ ಭೇದಿಸುವಲ್ಲಿ ನಂಜನಗೂಡು ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಪ್ರಿಯಕರನೇ ವಿವಾಹಿತ ಮಹಿಳೆಯ ಬರ್ಬರವಾಗಿ ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್(40) ಬಂಧಿತ ಆರೋಪಿ. ಕನಕಪುರದ ನಿವಾಸಿ ಮಂಜುಳ(40) ಪ್ರಿಯಕರನಿಂದ ಹತ್ಯೆಗೊಳಗಾದ ಮಹಿಳೆ.
ಕಳೆದ ವಾರ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದೇವಸ್ಥಾನದ ಬಳಿ ಇರುವ ಹದಿನಾರು ಕಾಲಿನ ಮಂಟಪದ ಬಳಿ ಅರೆನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ತನಿಖೆ ಆರಂಭಿಸಿ ಮೃತ ಮಹಿಳೆಯ ಕುರಿತು ಮಾಹಿತಿ ಕಲೆಹಾಕಿದ್ದರು. ಈ ವೇಳೆ ಕೊಲಯಾದವರು ಕನಕಪುರದ ಮಂಜುಳಾ ಎಂದು ತಿಳಿದುಬಂದಿದೆ. ಮೂಲತಃ ಮಳವಳ್ಳಿ ತಾಲೂಕಿನ ಮಂಜುಳಾ ವಿವಾಹಿತ ಮಹಿಳೆಯಾಗಿದ್ದು, ಮಹದೇವಾಚಾರಿ ಎಂಬುವರನ್ನ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳ ಸಹ ಇದ್ದಾರೆ. ಮಹದೇವಾಚಾರಿ ತನ್ನ ಪತ್ನಿ ಹಾಗೂ ಇಬ್ಬರ ಮಕ್ಕಳ ಸಮೇತ ಕನಕಪುರದಲ್ಲಿ ನೆಲೆಸಿದ್ದಾರೆ.
ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾಗೆ ಕೊಲೆ ಆರೋಪಿ ಶ್ಯಾಂಪ್ರಸಾದ್ ಪರಿಚಯವಾಗಿರುತ್ತದೆ. ಇಬ್ಬರ ನಡುವೆ ಸ್ನೇಹ ಬೆಳೆದ ಬಳಿಕ ಪ್ರಣಯಕ್ಕೆ ತಿರುಗುತ್ತದೆ. ಈ ವಿಚಾರ ಪತಿ ಮಹದೇವಾಚಾರಿಗೆ ತಿಳಿದು ಮಂಜುಳ ಅವರೊಂದಿಗೆ ಗಲಾಟೆ ಮಾಡಿರುತ್ತಾರೆ. ಅಲ್ಲದೇ ಶ್ಯಾಂಪ್ರಸಾದ್ ಸಹವಾಸ ಬಿಡುವಂತೆ ಪತಿ ಮನವಿಯನ್ನೂ ಮಾಡಿರುತ್ತಾರೆ. ಶ್ಯಾಂಪ್ರಸಾದ್ಗೆ 3 ಲಕ್ಷ ಸಾಲ ಕೊಟ್ಟಿದ್ದೀನಿ ಅದನ್ನು ವಾಪಸ್ ಪಡೆದು ನಂತರ ಸಹವಾಸ ಬಿಡ್ತೀನಿ ಎಂದು ಮಂಜುಳಾ ತನ್ನ ಪತಿಗೆ ತಿಳಿಸಿರುತ್ತಾರೆ. ಇಷ್ಟಾದರೂ ಇಬ್ಬರ ನಡುವೆ ಸಂಬಂಧ ಮುಂದುವರೆದಿರುತ್ತದೆ. ಏಪ್ರಿಲ್ 8 ರಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದ ಮಂಜುಳಾ ಮತ್ತೆ ಮನೆಗೆ ಹಿಂದಿರುಗಿರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.