ಮೈಸೂರು: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದ ಪುಟ್ಟ ಮಾದಯ್ಯ(45) ಅವರು ಏ.2ರಂದು ರಸ್ತೆ ಅಪಘಾತಕ್ಕೀಡಾಗಿದ್ದರು. ಮೆದುಳಿನ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಮತ್ತು ಬದುಕುಳಿಯುವ ಸಾಧ್ಯತೆ ಬಗ್ಗೆ ಪೋಷಕರಿಗೆ ವಿವರಿಸಿದರು. ಆ ದುಃಖದ ಸಂದರ್ಭದಲ್ಲಿಯೂ ಅವರ ಕುಟುಂಬ ಸದಸ್ಯರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಮುಂದಿನ ಕ್ರಮ ಕೈಗೊಳ್ಳಲು ಕೋರಿದರು. ನಿಯಮಾನುಸಾರ ಆಸ್ಪತ್ರೆ ವೈದ್ಯರು ಪುಟ್ಟ ಮಾದಯ್ಯ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಏ.4ರಂದು ಘೋಷಿಸಿದ್ದರು.
ವೈದ್ಯರ ತಂಡ ರೋಗಿಯ ಹೃದಯ, ಎರಡು ಕಿಡ್ನಿ ಮತ್ತು ಎರಡು ಕಾರ್ನಿಯಾಗಳನ್ನು(ಕಣ್ಣುಗಳು) ಕೊಯ್ಲು ಮಾಡಿ ಅವಶ್ಯಕತೆ ಇದ್ದ ರೋಗಿಗಳಿಗೆ ಕಸಿ ಮಾಡಲು ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಗ್ರೀನ್ ಕಾರಿಡಾರ್ ಮುಖಾಂತರ ರವಾನಿಸಲಾಯಿತು. ಒಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಯಿತು. ಎರಡು ಕಾರ್ನಿಯಾಗಳನ್ನು ಮತ್ತು ಒಂದು ಕಿಡ್ನಿಯನ್ನು ಜೆಎಸ್‌ಎಸ್ ಆಸ್ಪತ್ರೆಯಲ್ಲೇ ಅವಶ್ಯಕತೆ ಇದ್ದವರಿಗೆ ಕಸಿ ಮಾಡಲಾಗಿದೆ. ಅಂಗಾಂಗ ದಾನ ಮಾಡಲು ನಿರ್ಧಾರ ತೆಗೆದುಕೊಂಡ ಪುಟ್ಟ ಮಾದಯ್ಯ ಅವರ ಕುಟುಂಬ ಸದಸ್ಯರಿಗೆ ಜೆಎಸ್‌ಎಸ್ ಆಸ್ಪತ್ರೆ ಮತ್ತು ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.