ಮೈಸೂರು : ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೈಸೂರು - ಹುಣಸೂರು ಹೆದ್ದಾರಿಯ ಬನ್ನಿಕುಪ್ಪೆ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರನ್ನು ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾ.ಪಂ. ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಗ್ರಾ.ಪಂ ಸದಸ್ಯ ಲೇ. ಚಿಕ್ಕೇಗೌಡರ ಪುತ್ರ ಭಾಸ್ಕರ್(42) ಎಂದು ಗುರತಿಸಲಾಗಿದೆ. ಕಾರಿನ ಒಳಗೆ ಇದ್ದ ಪತ್ನಿ ರಮ್ಯ, ತಾಯಿ ಸಾವಿತ್ರಮ್ಮ, ಪುತ್ರ ಚರಿತ್ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣ ಸ್ಥಳೀಯ ಗ್ರಾಮಸ್ಥರು ಧಾವಿಸಿ ರಕ್ಷಣೆ ಮಾಡಿದ್ದು, ಮೈಸೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆ ವಿವರ : ಮೃತ ಭಾಸ್ಕರ್ ತಮ್ಮ ಕಾರಿನಲ್ಲಿ ಕುಟುಂಬ ಸಮೇತ ತಾಲೂಕಿನ ಮನುಗನಹಳ್ಳಿಯ ಮಾವನ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಹೆದ್ದಾರಿಯ ಬನ್ನಿಕುಪ್ಪೆ ಬಳಿ ಪಿರಿಯಾಪಟ್ಟಣ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಎದುರುಗಡೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟರೆ, ಕುಟುಂಬದವರಿಗೆ ತೀವ್ರ ಗಾಯಗಳಾಗಿದ್ದು, ನಜ್ಜುಗುಜ್ಜಾದ ಕಾರಿನಿಂದ ಗಾಯಾಳುಗಳನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹುಣಸೂರು ಬಸ್ ಡಿಪೋ ಮ್ಯಾನೇಜರ್ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲಿಸಿದರು.