ಮೈಸೂರು: ಉದ್ಯಮಿ ತಂದೆ ಹಾಗೂ ಮಗನನ್ನು ಅಪಹರಣ ಮಾಡಿ ಹಣ ಪಡೆದು ಬಿಟ್ಟು ಕಳುಹಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸಂಸ್ಥೆಯ ನೌಕರನೇ ನಿಜವಾದ ಖಳನಾಯಕ ಎಂಬ ಸತ್ಯಾಂಶ ಹೊರಬಿದ್ದಿದೆ. ಈ ಪ್ರಕರಣದ ಆರೋಪಿಗಳ ಪತ್ತೆ ಹಚ್ಚುವುದು ಮೈಸೂರು ಜಿಲ್ಲಾ ಪೊಲೀಸರಿಗೆ ಸವಾಲಾಗಿತ್ತು. ಅಪಹರಣಕಾರರು ಉದ್ಯಮಿ ಮತ್ತು ಪುತ್ರನ ಕಣ್ಣಿಗೆ ಬಟ್ಟೆ ಕಟ್ಟಿದ್ದಲ್ಲದೇ, ಬ್ಲಾಕ್ಮೇಲ್ ಮಾಡಲು ಉದ್ಯಮಿಯ ಮೊಬೈಲ್ ಫೋನ್ ಅನ್ನೇ ಬಳಕೆ ಮಾಡಿದ್ದರು.
ಆದರೆ ವರ್ಷದ ಹಿಂದೆ ಉದ್ಯಮಿಗೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದವನ ಬಗ್ಗೆ ಸಿಕ್ಕ ಸಣ್ಣ ಸುಳಿವಿನಿಂದ ಪೊಲೀಸರು ಇಡೀ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಉದ್ಯಮಿಯ ಕಾರ್ಖಾನೆಯಲ್ಲಿದ್ದ ಮಾಜಿ ನೌಕರನೇ ಅಪಹರಣದ ಸೂತ್ರಧಾರ ಎಂಬುದು ತನಿಖೆ ವೇಳೆ ಬಯಲಾಗಿದೆ. ಉದ್ಯಮಿ ದೀಪಕ್ ಕಾರ್ಖಾನೆಯ ಮಾಜಿ ನೌಕರನೇ ಅಪಹರಣಕ್ಕೆ ಸ್ಕೆಚ್ ಹಾಕಿದ್ದು, ಕೊನೆಗೂ ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ವಾರದೊಳಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 10 ಮಂದಿಯನ್ನು ಬಂಧಿಸಿದ್ದು, ಇನ್ನೋರ್ವನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳಿಂದ 21 ಲಕ್ಷದ ಹತ್ತು ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ಗಳು ಮತ್ತು ಮೊಬೈಲ್ ಫೋನ್‌ಗಳ ಜೊತೆ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸೀಮಾ ಲಾಟ್ಕರ್ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?: ಫೆಬ್ರವರಿ 6 ರಂದು ಮಧ್ಯಾಹ್ನದ ವೇಳೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಫ್ಯಾಕ್ಟರಿಗೆ ಬೈಕ್ ಮತ್ತು ಕಾರಿನಲ್ಲಿ ಬಂದ ಅಪಹರಣಕಾರರು ಮಾರಕಾಸ್ತ್ರಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ಬೆದರಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ಕಾರ್ಖಾನೆ ಮಾಲೀಕರಾದ ದೀಪಕ್ ಮತ್ತು ಹರ್ಷ ಅವರನ್ನು ಅವರದೇ ಕಾರಿನಲ್ಲಿ ಅಪಹರಿಸಿದ್ದರು. ಈ ವೇಳೆ ಅಪ್ಪ ಮಗನ ಕಣ್ಣಿಗೆ ಬಟ್ಟೆ ಕಟ್ಟಿದ್ದರು.
ಅಪಹರಣದ ಬಳಿಕ ದೀಪಕ್ ಕುಟುಂಬದವರಿಗೆ ದೀಪಕ್ ಮೊಬೈಲ್ ಫೋನ್‌ನಿಂದ ಕರೆ ಮಾಡಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಸಕಾಲದಲ್ಲಿ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ 35 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾರೆ. ಅಷ್ಟು ಹಣವನ್ನು ದೀಪಕ್ ಕುಟುಂಬದವರು ಹೊಂದಿಸಿ ಸ್ನೇಹಿತರ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಣ ಪಡೆದ ಅಪಹರಣಕಾರರು ಅವರಿಬ್ಬರನ್ನು ಬನ್ನೂರು ರಸ್ತೆಯಲ್ಲಿನ ಜಲಮಹಲ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಅಪಹರಣಕ್ಕೂ ಮುಂಚೆ ಬೆದರಿಕೆ ಕರೆ: ಉದ್ಯಮಿ ದೀಪಕ್ ಅವರ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಅದೇ ಕಾರ್ಖಾನೆಯ ಮಾಜಿ ನೌಕರ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನಲ್ಲದೇ ಬೆದರಿಕೆ ಹಾಕಿದ್ದ. ಆದರೆ ಉದ್ಯಮಿ ದೀಪಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಈ ಮಾಹಿತಿಯನ್ನು ಮಾಜಿ ನೌಕರ ಅಪಹರಣಕಾರರ ಗುಂಪಿನಲ್ಲಿದ್ದ ಒಬ್ಬನಲ್ಲಿ ಹಂಚಿಕೊಂಡಿದ್ದಾನೆ. ಉದ್ಯಮಿಯನ್ನು ಅಪಹರಿಸಿದರೆ ಕೋಟಿಗಟ್ಟಲ್ಲೇ ಹಣ ಸಂಪಾದಿಸಬಹುದು ಎಂದು ಆತ ಹೇಳಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತನಾದ ಮೊದಲನೇ ಆರೋಪಿ, ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮಾತನಾಡಿ 11 ಮಂದಿಯ ತಂಡವನ್ನು ರಚಿಸಿಕೊಂಡು ಅಪಹರಣ ಕೃತ್ಯ ನಡೆಸಿದ್ದಾರೆ ಎಂದು ವಿವರಿಸಿದರು.