ಮೈಸೂರು:ವೋಟರ್ ಐಡಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆಧಾರ್ ಬದಲಾಗಿ ಚುನಾವಣೆ ಆಯೋಗ ನಿಗದಿಪಡಿಸಿರುವ ದಾಖಲಾತಿ ಕೊಡಬಹುದು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಿಯೋಗದೊಂದಿಗೆ ಚರ್ಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಶೇ.60 ರಷ್ಟು ಮತದಾರರ ಚೀಟಿಗೆ ಆಧಾರ್ ಲಿಂಕ್ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಈ ಕೆಲಸ ಆಗಿದ್ದು, ಇನ್ನೂ ಕೆಲವು ಕಡೆ ಆಗಿಲ್ಲ. ಹಾಗಾಗಿ ಇದನ್ನು ಕಡ್ಡಾಯ ಮಾಡಿಲ್ಲ. ಪರಿಷ್ಕರಣೆಯಲ್ಲಿ ಹೆಸರು ಕೈ ಬಿಟ್ಟಿರುವ ಸಂಬಂಧ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ಮಾಡಿತ್ತು. ಅವರಿಗೆ ಈ ಪಟ್ಟಿಯಿಂದ ಕೈಬಿಡಲಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು.
ಒಂದೇ ಜಿಲ್ಲೆಯಲ್ಲಿ ಎರಡು ಕಡೆ ಪಟ್ಟಿಯಲ್ಲಿ ಹೆಸರಿದ್ದರೆ, ಅಂತಹವರ ಹೆಸರನ್ನ ಕೈಬಿಟ್ಟಿದ್ದೇವೆ. ಬೂತ್ ಲೇವಲ್ ಅಧಿಕಾರಿಗಳು ತಪ್ಪಾಗಿ ಕೆಲಸ ಮಾಡಿದ್ದಾರೆ. ನಮಗೆ ಮಾಹಿತಿ ನೀಡುವಂತೆ ತಿಳಿಸಿದ್ದೇವೆ. ಎಸ್ಒಪಿ ಪ್ರಕಾರವೇ ಎರಡು ಹೆಸರು ಇದ್ದವರು ಒಂದು ಕಡೆ ಉಳಿಸಿ ಡಿಲೀಟ್ ಮಾಡಲಾಗಿದೆ. ಈಗಲೂ ಹೆಸರು ಬಿಟ್ಟಿರುವವರು ಹೆಸರನ್ನ ಸೇರಿಸಬಹುದು ಎಂದು ಹೇಳಿದರು.
ನಮ್ಮ ಜಿಲ್ಲೆಗೆ ಹೊಸ ಇವಿಎಂ ಯಂತ್ರ ಬಂದಿದೆ. ಅಲ್ಲದೇ, ಬೇರೆ ಬೇರೆ ಜಿಲ್ಲೆಗಳಿಗೂ ಕೂಡ ಇವಿಎಂ ಯಂತ್ರ ಹೋಗಿದೆ. ಇವಿಎಂ ಯಂತ್ರದ ಬಗ್ಗೆ ಅನುಮಾನ ಬೇಡ, ಎಲ್ಲರೂ ಹೋಗಿ ಅದನ್ನ ಪರೀಕ್ಷೆ ನಡೆಸಬಹುದು ಎಂದು ತಿಳಿಸಿದರು.