ಮೈಸೂರು: ಹುಟ್ಟುಹಬ್ಬ ಆಚರಣೆ ವೇಳೆ ಅನ್ಯ ಕೋಮಿನ ಯುವಕರ ಗುಂಪು, ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ. ಪ್ರಸಾದ್ ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಸದ್ಯ ಯುವಕ ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿ ನಂಜನಗೂಡು ಪಟ್ಟಣದ ನೀಲಕಂಠ ನಗರದ ಸರ್ಕಲ್ನಲ್ಲಿ ಏರಿಯಾದ ಹುಡುಗರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಚಾಕು ಇರಿತಕ್ಕೊಳಗಾದ ಯುವಕ ಬಜ್ಜಿಯನ್ನು ತಿನ್ನಲು ಮನೆಯಿಂದ ಸರ್ಕಲ್ಗೆ ಬಂದಿದ್ದಾನೆ. ಯುವಕರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದಾರೆ.
ಈ ವೇಳೆ ಅಲ್ಲಿಗೆ ಬಂದ 5 ಜನ ಅನ್ಯ ಕೋಮಿನ ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕ್ಯಾತೆ ತೆಗೆದಿದ್ದಾರೆ. ನಂತರ ಪ್ರಸಾದ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು, ಹಣೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಶೋಹೆಬ್, ಇಲ್ಲು, ಸಲ್ಮಾನ್, ಜಾಫರ್ , ಇಸ್ಮಾಯಿಲ್ ಎಂಬ ಐದು ಜನರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಈಟಿವಿ ಭಾರತದೊಂದಿಗೆ ಚಾಕು ಇರಿತಕ್ಕೊಳಗಾದ ಯುವಕ ಪ್ರಸಾದ್ ಮಾತನಾಡಿ, ನಾನು ಬಜ್ಜಿ ತಿನ್ನಲೆಂದು ನೀಲಕಂಠ ನಗರದ ಸರ್ಕಲ್ಗೆ ಹೋಗಿದ್ದೆ, ಅಲ್ಲಿ ನನಗೆ ಪರಿಚಯದ ಹುಡುಗರು ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೇಕ್ ಕತ್ತರಿಸಿದ ಸಂದರ್ಭದಲ್ಲಿ ಯಾರೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. ಆಗ ಅನ್ಯಕೋಮಿನ ಯುವಕರು ಅಲ್ಲೇ ಇದ್ದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.