ಮೈಸೂರು: ರಸ್ತೆ ಅಪಘಾತದಲ್ಲಿ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ 27 ವರ್ಷದ ಮಣಿ ಎಂಬ ಯುವಕನ ಮೆದುಳು ನಿಷ್ಕ್ರಿಯ ಗೊಂಡಿದ್ದು, ಅಂಗಾಂಗ ದಾನ ಮಾಡುವ ಮೂಲಕ 6 ಜನರ ಜೀವ ಉಳಿಸಿದ ಮಣಿ, ಸಾವಿನಲ್ಲೂ ಸಾರ್ತಕತೆ ಮರೆದಿದ್ದಾರೆ. ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳು, ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಣಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಯನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಿಂದ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಮಾ.1 ರಂದು ಕರದೊಯ್ಯಲಾಗಿತ್ತು. ಅಲ್ಲಿ ಸಿಟಿ ಸ್ಕ್ಯಾನ್ ನಡೆಸಿದ ವೇಳೆ ಅವರ ಮೆದುಳಿನ ಕಾಂಡ ಊದಿಕೊಂಡಿರುವುದು ಪತ್ತೆಯಾಗಿತ್ತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.
ಮಾ.2 ರಂದು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯಿದೆ 1994ರ ಶಿಷ್ಟಾಚಾರದ ಅನುಸಾರ ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ವೈದ್ಯರ ತಂಡವು ಪರಿಶೀಲಿಸಿ ಘೋಷಣೆ ಮಾಡಿತು. ಘಟನೆಗೂ ಮುನ್ನ ಮಣಿ ಅವರು ಆರೋಗ್ಯದಿಂದ ಇದ್ದರಾ ಎಂದು ಮತ್ತಷ್ಟು ಪರೀಕ್ಷೆಗಳ ಮೂಲಕ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದನ್ನು ವೈದ್ಯರು ಖಚಿತಪಡಿಸಿಕೊಂಡರು. ಬಳಿಕ ಮಣಿ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬದವರು ಸ್ವಯಂಪ್ರೇರಿತರಾಗಿ ಮುಂದೆ ಬಂದರು.