ಮೈಸೂರು/ಬೆಂಗಳೂರು : ಪ್ರೀತಿ ಹೆಸರಿನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪ ಅರಮನೆ ನಗರಿಯಲ್ಲಿ ನಡೆದಿದ್ದು, ಇದೀಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಹಲವು ಬಡಾವಣೆಗಳಲ್ಲಿ ತಲೆಯೆತ್ತಿರುವ ಬೇಕರಿಯೊಂದರ ಮಾಲೀಕನ ಪುತ್ರ ಮನೋಜ್ ಎಂಬಾತನ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಯುವತಿಯೋರ್ವಳು ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮನೋಜ್ ಅಲಿಯಾಸ್ ಹೃತಿಕ್ ಬಂಧಿತ ಆರೋಪಿಯಾಗಿದ್ದು, ಜನವರಿ 23 ರಂದು ಯುವತಿ ಹತ್ಯೆಗೆ ಸಂಚು ರೂಪಿಸಿದ್ದ. ಅಲ್ಲದೆ, 30 ಮಾತ್ರೆಗಳನ್ನು ನುಂಗಿಸಿ ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದ ಎಂಬ ಆರೋಪದಡಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
ಪ್ರಿತಿ ಹೆಸರಿನಲ್ಲಿ ಎರಡು-ಮೂರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದು, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿದ್ದ ಮನೋಜ್ನನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಮನೋಜ್ ಪೋಷಕರಿಂದಲೂ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನೋಜ್ ತಂದೆ ಎಂ.ಎಸ್. ನಾರಾಯಣ್ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಯುವತಿ ದೂರಿನಲ್ಲಿ 'ಮನೋಜ್ ಅಲಿಯಾಸ್ ಹೃತಿಕ್ ಎಂಬಾತ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ಪರಿಚಯವಾಗಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ತು ಕರೆದು ಗೋಳಾಡಿ ನನ್ನನ್ನು ಬೆದರಿಸಿ ಪ್ರೀತಿಸುವುದಾಗಿ ಹೇಳಿ ಸುಮಾರು ಎರಡು-ಮೂರು ಬಾರಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಅವರ ತಂದೆ, ತಾಯಿ ಮತ್ತವರ ಅಕ್ಕನಿಗೆ ತಿಳಿಸಿ, ಅವರ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಅವರು ನನ್ನನ್ನು ಬಾಯಿಗೆ ಬಂದಂತೆ ಬೈದು , ನಿನಗೆ ಸ್ವಲ್ಪ ಹಣವನ್ನು ಬೇಕಾದರೆ ಕೊಡುತ್ತೇವೆ ಎಂದರು. ಅಷ್ಟೇ ಅಲ್ಲದೆ ಅವರ ಬೇಕರಿಯಲ್ಲಿ ಕೆಲಸ ಮಾಡುವ ಹೆಚ್.ಆರ್ ಅವರನ್ನು ಕರೆದುಕೊಂಡು ಬಂದು ಅವರಿಂದ ನನಗೆ ಬೈಯಿಸಿದ್ದಾರೆ.
ಜನವರಿ 23 ರಂದು ರಾತ್ರಿ ವೇಳೆ ಮನೋಜ್ ಬಂದು ನನಗೆ ಬಾಯಿಗೆ ಬಂದಂತೆ ಬೈದು ನನ್ನನ್ನು ಅವನ ಕಾರಿನಲ್ಲಿ ಕೂರಿಸಿಕೊಂಡು 20 ರಿಂದ 30 ಮಾತ್ರೆಗಳನ್ನು ಬಲವಂತವಾಗಿ ನನ್ನ ಬಾಯಿಗೆ ತುರುಕಿ ಸಾಯಿಸಲು ಪ್ರಯತ್ನಪಟ್ಟಿದ್ದಾನೆ. ನಂತರ ಆತನೇ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ. ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು' ಸಂತ್ರಸ್ತೆ ದೂರನ್ನು ನೀಡಿದ್ದು, ಯುವತಿ ನೀಡಿರುವ ದೂರಿನ ಮೇರೆಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.