ಮೈಸೂರಿನಲ್ಲಿ ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ: ದೂರು ದಾಖಲು ಮೈಸೂರು: ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಬಾಡಿಗೆ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿದ ಅಧಿಕಾರಿಗಳಿಗೆ ಬಾಡಿಗೆದಾರನ ಪತ್ನಿ ಮಚ್ಚು ಹಿಡಿದು ರಂಪಾಟ ಮಾಡಿದ ಘಟನೆ ನಗರದ ಸಾತಗಳ್ಳಿ ಬಸ್ ಡಿಪೋದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಅಧಿಕಾರಿಗಳ ದೂರಿನ ಮೇರೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶಫೀಕ್ ಅಹಮದ್ ಎಂಬುವರು 12 ವರ್ಷಗಳ ಅವಧಿಗೆ ಬಾಡಿಗೆಗೆ ಪರವಾನಗಿ ಪಡೆದಿದ್ದರು. ಆದರೆ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದರು. ಇದರ ಒಪ್ಪಂದವು ಇತ್ತೀಚೆಗೆ ಡಿ.10ರಂದು ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಕಿ ಉಳಿದ 1 ಕೋಟಿ 80 ಲಕ್ಷ ಹಣ ಪಾವತಿಸುವಂತೆ ಸಂಬಂಧಿಸಿದ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಈ ವಿಚಾರವಾಗಿ ಶನಿವಾರ ಅಧಿಕಾರಿಗಳು ಸಾತಗಳ್ಳಿ ಬಸ್ ನಿಲ್ದಾಣ ಬಳಿ ಬಂದು ವಿಚಾರಿಸುತ್ತಿರುವಾಗ ಬಾಡಿಗೆ ಪಡೆದ ಶಫಿ ಹಾಗೂ ಅವರ ಪತ್ನಿ ಮುನಿ ಬುನ್ನಿಸಾ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಸಂದರ್ಭದಲ್ಲಿ ಶಫಿಯ ಪತ್ನಿ ಮುನಿ ಬುನ್ನಿಸಾ ಅಧಿಕಾರಿಗಳಿಗೆ ಮಚ್ಚು ಹಿಡಿದು ರಂಪಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದೆ. ಘಟನೆ ಸಂಬಂಧ ದಂಪತಿ ವಿರುದ್ಧ ಅಧಿಕಾರಿಗಳು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಐಪಿಸಿ 1860 (U/s-353,504,506,34) ಅಡಿ ಪ್ರಕರಣ ದಾಖಲಾಗಿದ್ದು, ದಂಪತಿ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ:ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟ: ದಾವಣಗೆರೆಯಲ್ಲಿ ಮಗ ಸಾವು, ತಾಯಿ ಸ್ಥಿತಿ ಚಿಂತಾಜನಕ