ಮೈಸೂರು: ಮದುವೆಯಾಗಿ 7 ವರ್ಷವಾದರೂ, ಮಕ್ಕಳಾಗಲಿಲ್ಲಿ ಎಂಬ ಕೊರಗಿನಿಂದ ಮಹಿಳೆಯೋರ್ವಳು ಮಗು ಕದ್ದೊಯ್ದ ಐದೇ ಗಂಟೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ದೇವರಾಜ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಮಗು, ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ.
ಘಟನೆ ವಿವರ: ಚೆಲುವಾಂಬ ಆಸ್ಪತ್ರೆಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಸುಮತಿ ಎಂಬುವವರ 11 ದಿನದ ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ಬೆಳಗ್ಗೆ 11 ಗಂಟೆ ಸಮಯದಲ್ಲಿ ಮಗುವಿನ ತಂದೆ ಪ್ರೇಮಮಾಜಿಯನ್ನ ಸಂಪರ್ಕಿಸಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಬೇಕು, ಅಲ್ಲಿ ಪುರುಷರಿಗೆ ಪ್ರವೇಶ ಇಲ್ಲಾ ಎಂದು ಸುಳ್ಳು ಹೇಳಿ ನಂಬಿಸಿದ್ದಾಳೆ. ಅಲ್ಲದೆ, ನಜವಾತ ಶಿಶುವನ್ನು ಪಡೆದುಕೊಂಡು ಪರಾರಿಯಾಗಿದ್ದಳು. ನಂತರ ಪ್ರೇಮಮಾಜಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮಗುವನ್ನು ಎಲ್ಲಾ ಕಡೆ ಹುಡುಕಿದ್ದಾರೆ. ಸಿಗದೇ ಇದ್ದ ಕಾರಣ ದೇವರಾಜ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಧಾವಿಸಿದ ದೇವರಾಜ ಠಾಣಾ ಇನ್‌ಸ್ಪೆಕ್ಟರ್ ಬಿ.ಶಿವಕುಮಾರ್, ಸಬ್ಇನ್ಸ್ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲಿಸಿ ಹಾಗೂ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ್ದರು.
ಏರಿಯಾ ಪತ್ತೆ ನಂತರ ಅಪರಿಚಿತ ಮಹಿಳೆ ಹೋಗಿರುವ ದಾರಿಯಲ್ಲಿ ಪರಿಶೀಲನೆ ನಡೆಸಿ, ಆಕೆ ಹೋಗಿದ್ದ ಆಟೋ ರಿಕ್ಷಾ ಪತ್ತೆ ಮಾಡಿ ಆಕೆ ಇಳಿದುಕೊಂಡಿದ್ದ ಕುಂಬಾರ ಕೊಪ್ಪಲು ಏರಿಯಾವನ್ನು ಪೂರ್ತಿಯಾಗಿ ಹುಡುಕಾಡಿ ಕೊನೆಗೆ ಆಕೆ ತೆರಳಿದ್ದ ಮನೆಯನ್ನು ಪತ್ತೆ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗುವಿಗೆ ತಾಯಿಯ ಹಾಲಿಲ್ಲದೆ ನಿತ್ರಾಣವಾಗಿತ್ತು. ತಕ್ಷಣ ಮಗುವನ್ನು ತ್ವರಿತವಾಗಿ ತಾಯಿಗೆ ತಂದು ಒಪ್ಪಿಸಿದ್ದಾರೆ. ತಾಯಿಯ ಹಾಲಿಲ್ಲದೆ ಅಳುತ್ತಿದ್ದ ಕಂದಮ್ಮ ಹಾಗೂ ತನ್ನ ಮಗುವನ್ನು ಕಾಣದೆ ಅತ್ತು ನಿತ್ರಾಣಗೊಂಡಿದ್ದ ಬಾಣಂತಿ ತಾಯಿ ಒಂದಾಗಿದ್ದಾರೆ. ಸ್ಥಳದಲ್ಲಿದ್ದ ಜನರು, ಪೊಲೀಸರ ಕ್ಷಿಪ್ರ ಕಾರ್ಯಚರಣೆಯನ್ನ ಸಾರ್ವಜನಿಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಮಗು ಕದ್ದ ಅಪರಿಚಿತ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಮಗು ಕದ್ದೊಯ್ದಿದ್ದ ಮಹಿಳೆ ತನಗೆ 7ವರ್ಷದಿಂದ ಮಗುವಿಲ್ಲದೇ ಇದ್ದ ಕಾರಣ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾಳೆ. ತ್ವರಿತ ಕಾರ್ಯಾಚರಣೆ ಮಾಡಿ ಮಗುವನ್ನು ರಕ್ಷಣೆ ಮಾಡಿ ತಾಯಿಗೊಪ್ಪಿಸಿದ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ಅವರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯಿಂದ ಮಗು ವಾಪಸ್ ಬಂದಿದ್ದಕ್ಕೆ ಅದರ ಪೋಷಕರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನರ್ಸ್ ವೇಷದಲ್ಲಿ ಬಂದು ಮಗು ಕದ್ದಿದ್ದ ಚಾಲಾಕಿ.. ನವಜಾತ ಶಿಶು ಒಂದೇ ದಿನದಲ್ಲಿ ತಾಯಿ ಮಡಿಲು ಸೇರಿದ್ದು ಹೇಗೆ?