ಮೈಸೂರು: ಸಾಮಾನ್ಯವಾಗಿ ಮನೆ, ದೊಡ್ಡ ದೊಡ್ಡ ಮಾಲ್ಗಳು, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಆದರೆ, ಮೈಸೂರಿನ ತರಕಾರಿ ವ್ಯಾಪಾರಸ್ಥರೊಬ್ಬರು ತಮ್ಮ ಗೂಡ್ಸ್ ಆಟೋಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಇಷ್ಟಕ್ಕೂ ಅವರು ಏಕೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಎದುರಿಗೆ ಇರುವ ರಸ್ತೆಯ ಪಕ್ಕದಲ್ಲಿ. ಗೂಡ್ಸ್ ಆಟೋದಲ್ಲಿ ಅವರೆಕಾಯಿ, ತೊಗರಿಕಾಯಿ, ಕಡ್ಲೆಕಾಯಿ ಸೇರಿದಂತೆ ಆಯಾ ಋತುಮಾನಗಳಲ್ಲಿ ಬೆಳೆಯುವ ತರಕಾರಿಗಳನ್ನು ಹುಣಸೂರಿನ ಬನ್ನಿಕುಪ್ಪೆ ಕಡೆಯಿಂದ ತಂದು ಇಲ್ಲಿ ವ್ಯಾಪಾರ ಮಾಡಲಾಗುತ್ತದೆ. ಆದರೆ ಈ ಗಾಡಿಯ ಮಾಲೀಕ ಮಹದೇವ್, ಇಲ್ಲಿ ಕೆಲಸಕ್ಕೆ ಹುಡುಗರನ್ನು ಇಟ್ಟುಕೊಂಡಿದ್ದು, ಅವರು ಮತ್ತೊಂದು ಕಡೆ ವ್ಯಾಪಾರ ಮಾಡುತ್ತಾರೆ.
ಇಲ್ಲಿ ಸ್ವತಃ ಮಾಲೀಕರೇ ಇದ್ದಾಗ ವ್ಯಾಪಾರ ಚೆನ್ನಾಗಿ ನಡೆಯುತ್ತದೆಯಂತೆ. ಕೆಲಸದ ಹುಡುಗರು ಇದ್ದಾಗ ವ್ಯಾಪಾರ ಹೆಚ್ಚು ಇರುವುದಿಲ್ಲವಂತೆ. ಹೀಗಾಗಿ ಇಲ್ಲಿನ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ನಿಗಾ ವಹಿಸಲು 6 ಸಾವಿರ ರೂಪಾಯಿ ಕೊಟ್ಟು ಸಿಸಿಟಿವಿ ಖರೀದಿಸಿ ಆಟೋಗೆ ಅಳವಡಿಸಿದ್ದಾರೆ. ಸಿಸಿಟಿವಿ ಕ್ಯಾಮರಾಗೆ ಸಿಮ್ ಮತ್ತು ಮೆಮೊರಿ ಕಾರ್ಡ್ ಇದೆ. ಮಾಲೀಕರು ಎಲ್ಲೇ ಇದ್ದರೂ, ಅಲ್ಲಿಂದ ಇಲ್ಲಿನ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ತಮ್ಮ ಮೊಬೈಲ್ನಿಂದಲೇ ನೋಡಬಹುದು ಮತ್ತು ಡೇಟಾವನ್ನು 30 ದಿನಗಳವರೆಗೆ ಉಳಿಸಿಕೊಳ್ಳಬಹುದಾಗಿದೆ.