ಮೈಸೂರು: ಕರುವನ್ನು ಇರಿಸಲಾಗಿದ್ದ ಬೋನಿಗೆ ಬಿದ್ದ ಜೋಡಿ ಚಿರತೆ ಮೈಸೂರು: ಜನರನ್ನು ಪಲಿ ಪಡೆಯುವುದಲ್ಲದೇ, ರೈತರ ಬೆಳೆ ನಾಶ ಮಾಡುತ್ತಿದ್ದ ಜೋಡಿ ಚಿರತೆಗಳು ಕೊನೆಗೂ ಬೋನಿಗೆ ಬಿದ್ದಿವೆ. ತಿ.ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬವರ ಜಮೀನಿನಲ್ಲಿ ಅರಣ್ಯಾಧಿಕಾರಿಗಳು ಬೋನ್ ಇರಿಸಿ, ಅದರಲ್ಲಿ ಕರುವನ್ನು ಕಟ್ಟಿ ಹಾಕಿದ್ದರು. ಇಂದು ಮುಂಜಾನೆ ಕರುವನ್ನು ತಿನ್ನಲು ಬಂದ ಚಿರತೆಗಳು ಕೊನೆಗೂ ಬೋನಿನಲ್ಲಿ ಬಂಧಿಯಾಗಿವೆ. ಆದರೆ ಜೋಡಿ ಚಿರತೆಗಳು ಕರುವನ್ನು ತಿನ್ನದೇ ಹಾಗೆಯೇ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
ಈ ಚಿರತೆಗಳನ್ನು ನೋಡಲು ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಜನರನ್ನು ಬಲಿ ಪಡೆದಿದೆ. ಈ ಹಿನ್ನೆಲೆ ತಿ.ನರಸೀಪುರ ತಾಲೂಕಿನ ಬನ್ನೂರು ಮತ್ತು ಸೋಸಲೆ ಹೋಬಳಿಯ ಗ್ರಾಮಗಳಲ್ಲಿ ಚಿರತೆಯ ಚಲನವಲನಗಳನ್ನು ಗಮನಿಸಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಚಿರತೆಗಳು ಓಡಾಡುವ ಸ್ಥಳಗಳಲ್ಲಿ ದೊಡ್ಡ ಬೋನುಗಳನ್ನು ಇರಿಸಲಾಗಿದೆ.
ಇದನ್ನೂ ಓದಿ:ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು
ಚಿರತೆ ಪ್ರತ್ಯಕ್ಷ; ಶಾಲೆಗಳ ವೇಳೆ ಬದಲಾವಣೆ:ಮೈಸೂರು ಜಿಲ್ಲೆಯ ಕೆ ಆರ್ ನಗರ ಪಟ್ಟಣದ ಹೊರವಲಯದಲ್ಲಿರುವ ಕೆಜಿಬಿವಿ ಹಾಗೂ ಎಸ್.ಕೆ.ಆರ್.ಜಿ.ಜೆ.ಸಿ ಕಾಲೇಜು ಮೈದಾನದ ಬಳಿ ನಿನ್ನೆ ಚಿರತೆ ಪ್ರತ್ಯಕ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೆ ಆರ್ ನಗರ ಪಟ್ಟಣ ವ್ಯಾಪ್ತಿಯ 16 ಮತ್ತು 17 ನೇ ವಾರ್ಡಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಡಶಾಲೆ, ಅಂದರೆ 1 ರಿಂದ 10ನೇ ತರಗತಿಯವರೆಗಿನ ಶಾಲೆಯನ್ನು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭಿಸುವಂತೆ ವೇಳೆ ಬದಲಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ. ಇದರ ಜೊತೆಗೆ ಎಲ್ಲಾ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಚಿರತೆ ದಾಳಿಯಿಂದ ದಂಪತಿಗೆ ಗಾಯ :ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ನಿಂಗೇಗೌಡರ ತೋಟದ ಮನೆಗೆ ತಡರಾತ್ರಿ ಚಿರತೆ ದಾಳಿ ನಡೆಸಿದೆ. ತೋಟದ ಮನೆಯಲ್ಲಿ ಮಲಗಿದ್ದ ನಿಂಗೇಗೌಡ ಮತ್ತು ಗೌರಮ್ಮ ಎಂಬ ದಂಪತಿ ಮೇಲೆ ಮಧ್ಯರಾತ್ರಿ ಚಿರತೆ ದಾಳಿ ಮಾಡಿದೆ. ಪರಿಣಾಮ ದಂಪತಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಇಬ್ಬರನ್ನು ತಾಲೂಕು ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ದಾಳಿ ನಡೆಸಿದ ಚಿರತೆಯನ್ನು ಗ್ರಾಮಸ್ಥರು ನಿಂಗೇಗೌಡ ಮನೆಯಲ್ಲಿ ಕೂಡಿಹಾಕಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:'ದುಬಾರೆ ಆನೆ ಶಿಬಿರ'ದಲ್ಲಿ ಮೂರು ಕಾಡಾನೆಗಳಿಗೆ ತರಬೇತಿ: ಆರು ತಿಂಗಳಲ್ಲಿ ಸಾಕಾನೆಗಳಾಗಿ ಪರಿವರ್ತನೆ