ಮೈಸೂರು:ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ನಡುವಿನ ಕಿತ್ತಾಟದಿಂದ ರಸ್ತೆ ಡಾಂಬರೀಕರಣ ಕಾಣದೆ ಗ್ರಾಮಸ್ಥರು ನಿತ್ಯ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಮೈಸೂರಿನ ಸರಗೂರು ತಾಲ್ಲೂಕು ದೇವಲಾಪುದಿಂದ ಗಿರಿಯಾಬೋವಿ ಕಾಲೋನಿಯವರೆಗಿನ ರಸ್ತೆ ದುರಸ್ತಿಗೆ ಕಳೆದ ಐದು ವರ್ಷಗಳ ಹಿಂದೆಯೆ ಜಲ್ಲಿಕಲ್ಲು ಹಾಕಲಾಗಿದೆ. ಆದರೆ ಗಿರಿಯಾಬೋವಿ ಕಾಲನಿಯ ಸಮೀಪ ಕಾಡು ಪ್ರಾಣಿಗಳು ಹೆಚ್ಚಾಗಿ ಸಂಚರಿಸುವುದರಿಂದ ರಸ್ತೆಗೆ ಡಾಂಬರು ಹಾಕಲು ಅಡ್ಡಿಯಾಗಿದೆ.
15 ಕೀ.ಮೀ ಉದ್ದವಿರುವ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ದೇವಲಾಪುರ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಪ್ರಾಣಿಗಳ ಸಂಚಾರಕ್ಕೆ ಮಣ್ಣು ರಸ್ತೆ ಇರಬೇಕೆಂದು ಸೋಲಾರ್ ಪೆನ್ಸ್ ಹಾಕಿದ್ದಾರೆ. ಸೋಲಾರ್ ಪೆನ್ಸ್ ಮಾರ್ಗ ಬಿಟ್ಟು ಬೇರೆ ಕಡೆ ಡಾಂಬರೀಕರಣ ಮಾಡಿದರೆ ನಮ್ಮ ತರಕಾರು ಇಲ್ಲ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಕಿತ್ತಾಟದಿಂದ ಸರಗೂರು ಹಾಗೂ ಹೆಡಿಯಾಲಕ್ಕೆ ಸಂಚಾರ ಮಾಡುವ ಗ್ರಾಮಸ್ಥರು 15 ಕಿ.ಮೀ ವರೆಗೆ ಇದೇ ರಸ್ತೆಯಲ್ಲಿ ಸಂಚಾರ ಮಾಡುವುದು ಅನಿವಾರ್ಯವಾಗಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಈ ಕಿತ್ತಾಟ ನಿಲ್ಲಿಸಿ, ರಸ್ತೆಗೆ ಡಾಂಬರೀಕರಣ ಮಾಡಬೇಕು. ಇಲ್ಲವಾದರೆ ನ್ಯಾಯಾಲಯದ ಕದ ತಟ್ಟಲು ಸಿದ್ಧವಿರುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.