ಮೈಸೂರು: ಜಾಮೀನು ಪಡೆದು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯೊಬ್ಬನ್ನು ಸೆಲ್ಫಿ ಹಿಡಿದುಕೊಟ್ಟಿದೆ. ತಾನೇ ಸೆಲ್ಫಿ ತೆಗೆದು ಫೇಸ್ಬುಕ್ನಲ್ಲಿ ಹಾಕಿ ಪೊಲೀಸರ ಬಲೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಮಧುಸೂದನ್ ಎಂಬಾತನೇ ಬಂಧಿತ ಆರೋಪಿ. ಖಾಸಗಿ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಈತ ಕೆಲ ವರ್ಷಗಳ ಹಿಂದೆ ತನ್ನ ಸ್ನೇಹಿತರಾದ ಶ್ರೀರಂಗ ಹಾಗೂ ಅಭಿಷೇಕ್ ಜೊತೆ ಸೇರಿ ಟ್ರೆಂಡಿಂಗ್ ಕಂಪನಿ ಆರಂಭಿಸಿದ್ದ. ಅದರಲ್ಲಿ ಸುಮಾರು ಒಂದು ಕೋಟಿ ರೂಪಾಯಿ ನಷ್ಟವಾಗಿ ಕೈ ಸುಟ್ಟುಕೊಂಡಿದ್ದ.
ವ್ಯಕ್ತಿ ಕೊಲೆಗೈದು ನೆಕ್ಲೆಸ್ ದರೋಡೆ:ಅದೇ ವೇಳೆ ಬೆಂಗಳೂರಿನ ಲಕ್ಕಸಂದ್ರ ಬಡಾವಣೆಯ ಉದಯ ರಾಜ್ಸಿಂಗ್ ಮತ್ತು ಸುಶೀಲಾ ದಂಪತಿ ಡೈಮಂಡ್ ನೆಕ್ಲೇಸ್ ಮಾರಾಟಕ್ಕಿದೆ ಎಂದು ಆನ್ಲೈನ್ನಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ ಮಧುಸೂದನ್ ಮತ್ತು ಅಭಿಷೇಕ್ ಆ ಡೈಮಂಡ್ ನೆಕ್ಲೇಸ್ ಅನ್ನು ಕಳವು ಮಾಡಲು ಐದು ಜನರೊಂದಿಗೆ ಸೇರಿ ಸಂಚು ರೂಪಿಸಿದ್ದ. ಅಂತೆಯೇ 2014ರ ಮಾರ್ಚ್ 25ರಂದು ಬೆಂಗಳೂರಿನ ಮನೆಗೆ ಹೋಗಿ ತಾವು ಡೈಮಂಡ್ ನೆಕ್ಲೆಸ್ ಖರೀದಿಸುತ್ತೇವೆ ಎಂದು ಹೇಳಿ ದರ ಪ್ರಸ್ತಾಪಿಸಿ ಮಾತನಾಡುತ್ತಿದ್ದಂತೆ ಉದಯ ರಾಜ್ಸಿಂಗ್ರನ್ನು ಕೊಲೆ ಮಾಡಿ ನೆಕ್ಲೆಸ್ ದೋಚಿದ್ದರು.