ಮೈಸೂರು: ಮಾನಸಿಕ ಅಸ್ವಸ್ಥೆಯೋರ್ವಳು ತನ್ನ 4 ವರ್ಷದ ಮಗನನ್ನೇ ಮಚ್ಚಿನಿಂದ ಮನಬಂದತೆ ಕೊಚ್ಚಿ ಕೊಲೆ ಮಾಡಿರುವ ಭೀಭತ್ಸ ಘಟನೆಯೊಂದು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೂದುನೂರು ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ ತನ್ನ ತಾಯಿಯಿಂದ ಭೀಕರವಾಗಿ ಕೊಲೆಗೀಡಾದ ಮೃತ ಬಾಲಕ ಎಂದು ತಿಳಿದುಬಂದಿದೆ. ಘಟನೆಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಬೂದುನೂರು ಗ್ರಾಮದ ಶಂಕರ್ ಯಡೆತೊರೆ ಗ್ರಾಮದ ಭವಾನಿಯನ್ನು ಮದುವೆಯಾಗಿದ್ದು ದಂಪತಿಗೆ 4 ವರ್ಷದ ಮಗ ಇದ್ದ. ಈಕೆ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳುತ್ತಿದ್ದು, ಮಾನಸಿಕ ಅಸ್ವಸ್ಥವಾಗಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಗಂಡನನ್ನ ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು.
ಕಳೆದ 15 ದಿನಗಳ ಹಿಂದೆ ಪತಿಯೇ ಹೋಗಿ ಪತ್ನಿ ಮತ್ತು ಮಗನನ್ನ ಬೂದುನೂರಿಗೆ ಕರೆದುಕೊಂಡು ಬಂದಿದ್ದ. ಆದರೆ, ನಿನ್ನೆ ರಾತ್ರಿ ಕೆಲಸ ನಿಮಿತ್ತ ಹೊರಗಡೆ ಹೋದಾಗ ಅಸ್ವಸ್ಥ ತಾಯಿ ತನ್ನ 4 ವರ್ಷದ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಇದರಿಂದ ಬಾಲಕನ ತಲೆ ಭಾಗ ಸಂಪೂರ್ಣವಾಗಿ ರಕ್ತಸಿಕ್ತವಾಗಿತ್ತು.