ಮೈಸೂರು: ಕಾದಂಬರಿಗಾರ್ತಿ ತ್ರಿವೇಣಿ ಅವರ ವಾಸವಿದ್ದ ಮೈಸೂರಿನ 120 ವರ್ಷದ ಹಳೆಯ ಮನೆಯನ್ನು ಬೆಳ್ಳಿ ಮೋಡ ಮ್ಯೂಸಿಯಂ ಮಾಡುವ ಕಾಮಗಾರಿಗೆ ಅವರ ಮಗಳು ಇಂದು ಚಾಲನೆ ನೀಡಿದ್ದಾರೆ.
ಕಾದಂಬರಿ ಲೋಕ ತ್ರಿವೇಣಿ ಅಜರಾಮರ:ಕನ್ನಡ ಕಾದಂಬರಿ ಲೋಕದಲ್ಲಿ ತ್ರಿವೇಣಿ ಅವರ ಹೆಸರು ಅಜರಾಮರ. ಕೇವಲ 13 ವರ್ಷ ಅವಧಿಯಲ್ಲಿ 24 ಕಾದಂಬರಿಗಳು 41 ಸಣ್ಣ ಕತೆಗಳನ್ನ ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಖ್ಯಾತಿಯ ಛಾವು ಮೂಡಿಸಿದ್ದಾರೆ. ತ್ರಿವೇಣಿ ಅವರ ಪ್ರಸಿದ್ಧ ಕಾದಂಬರಿ ಶರ ಪಂಜರ, ಬೆಳ್ಳಿ ಮೋಡ, ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು ಹಾಗೂ ಕಂಕಣ ಅವರ ಪ್ರಸಿದ್ಧ ಕಾದಂಬರಿಗಳಂತೂ ಸಿನಿಮಾ ಆಗಿ ಪ್ರಸಿದ್ದಿ ಪಡೆದಿವೆ.
ತ್ರಿವೇಣಿ ಮನೆಗೆ 120 ವರ್ಷ: ತ್ರಿವೇಣಿ ಅವರು ಮೈಸೂರಿನ ಚಾಮರಾಜಪುರಂ ಮನೆಯಲ್ಲಿ ವಾಸವಿದ್ದರು. ಈ ಮನೆಗೆ ಈಗ 120 ವರ್ಷವಾಗಿದೆ. ಈ ಮನೆಯನ್ನ ಅವರ ಪುತ್ರಿ ಮೀರಾ ಶಂಕರ್ ಪಾರಂಪರಿಕ ತಜ್ಞರ ಸಹಾಯದಿಂದ ಬೆಳ್ಳಿಮೋಡ ಎಂಬ ವಸ್ತು ಸಂಗ್ರಹಾಲಯ ಮಾಡಲು ಇಂದು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು.
ಬೆಳ್ಳಿಮೋಡ ಮ್ಯೂಸಿಯಂ: ಈಟಿವಿ ಭಾರತ್ ಜತೆಗೆ ಮೀರಾ ಶಂಕರ್ ಮಾತನಾಡಿ, ತಾಯಿ ತ್ರಿವೇಣಿ ಬಾಳಿ ಬದುಕಿದ ಈ ಮನೆಯನ್ನು ಬೆಳ್ಳಿಮೋಡ ಮ್ಯೂಸಿಯಂ ಆಗಿ ಮಾಡಲು ಲಂಡನ್ ಶೇಕ್ಸ್ ಫಿಯರ್ ಮ್ಯೂಸಿಯಂ ನನಗೆ ಪ್ರೇರಣೆ ಆಗಿದೆ. ಈ ಮ್ಯೂಸಿಯಂ ನಲ್ಲಿ ಅಮ್ಮ ಬಳಸುತ್ತಿದ್ದ ಎಲ್ಲ ವಸ್ತುಗಳು, ಅವರ ಹಳೆಯ ಬರವಣಿಗೆಗಳನ್ನು ಈ ಸಂಗ್ರಹಾಲಯದಲ್ಲಿ ಇಡಲಾಗುವುದು. ಈ ಮ್ಯೂಸಿಯಂ ನಿರ್ಮಾಣಕ್ಕೆ ತ್ರಿವೇಣಿ ಅವರ ಅಭಿಮಾನಿ ಒಬ್ಬರು ವೆಚ್ಚವನ್ನ ಭರಿಸಲಿದ್ದಾರೆ.