ಕರ್ನಾಟಕ

karnataka

ETV Bharat / state

ಸಾಮಾಜಿಕ ಬಹಿಷ್ಕಾರ:‌ ಮನನೊಂದು ದಯಾಮರಣ ಕೋರಿದ ಇಂಜಿನಿಯರ್ ಕುಟುಂಬ! - ದಯಾಮರಣ ಕೋರಿದ ಕುಟುಂಬ ಸುದ್ದಿ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಸಾಮಾಜಿಕ ಬಹಿಷ್ಕಾರದಿಂದ ಮನನೊಂದ ಇಂಜಿನಿಯರ್​ ಮತ್ತು​​ ರೈತ ಕುಟುಂಬವೊಂದು ದಯಾಮರಣ ನೀಡುವಂತೆ ಮನವಿ ಮಾಡುತ್ತಿರುವ ಮನಕಲಕುವ ಪ್ರಕರಣ ನಡೆದಿದೆ.

a family seeking Euthanasia
ಇಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

By

Published : Jun 28, 2020, 1:38 PM IST

ಮೈಸೂರು: ವೈಜ್ಞಾನಿಕ ಯುಗದಲ್ಲೂ ಮೆಕ್ಯಾನಿಕಲ್ ಇಂಜಿನಿಯರ್ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಮನನೊಂದ ಕುಟುಂಬ ದಯಾಮರಣ ಕೋರಿರುವ ಘಟನೆ ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಶಿರಮಳ್ಳಿ ಗ್ರಾಮದ ಮಹದೇವಪ್ಪನವರ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರದ ಗದಾಪ್ರಹಾರ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರ ಹೇರಲಾಗಿದ್ದು ಕಿರುಕುಳ ನೀಡುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಮಹದೇವಪ್ಪ ಅವರ ಪುತ್ರ ನವೀನ್, ಮೆಕ್ಯಾನಿಕಲ್ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೈ ತುಂಬ ಸಂಬಳ ಸಿಗುತ್ತಿದ್ದರೂ, ವೃತ್ತಿಗೆ ಗುಡ್ ಬೈ ಹೇಳಿ ಸ್ವಗ್ರಾಮಕ್ಕೆ ಆಗಮಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

ಇಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಮನೆಯ ಮುಂಭಾಗದಲ್ಲಿ ನಡೆದ ಚರಂಡಿ ಕಾಮಗಾರಿಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಶಿರಮಳ್ಳಿ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಯೋಜನೆ ಅಡಿಯಲ್ಲಿ ಮನೆ ಮುಂದೆ ನವೀನ್​ ತಂದೆ ಮಹದೇವಪ್ಪ‌ ಅವರು ಶೌಚಾಲಯ ನಿರ್ಮಿಸಿಕೊಳ್ಳುತ್ತಿದ್ದರು. ಈ ವೇಳೆ ಅನಗತ್ಯವಾಗಿ ಶೌಚಾಲಯ ತೆರವುಗೊಳಿಸುವಂತೆ ಒತ್ತಡ ತಂದು ಕಾಮಗಾರಿಗೂ ಶೌಚಾಲಯಕ್ಕೂ ಸಂಬಂಧವಿಲ್ಲದಿದ್ದರೂ ತೆರುವುಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಶೌಚಾಲಯದ ತೆರವುಗೊಳಿಸಲು ಒಪ್ಪದಿದ್ದಕ್ಕೆ ಮಹದೇವಪ್ಪ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಬರೆ ಹಾಕಲಾಗಿದೆ. ಇಂಜಿನಿಯರಿಂಗ್ ವೃತ್ತಿ ತೊರೆದು 4 ಎಕರೆ ಜಮೀನಿನಲ್ಲಿ ಚೆಂಡು ಹೂವು ರೇಷ್ಮೆ ಹಾಗೂ ಇನ್ನಿತರ ಬೆಳೆ ಬೆಳೆ ಹಾಕಿರುವ ನವೀನ್ ಜಮೀನಿಗೆ, ಗ್ರಾಮದ ಯಾವೊಬ್ಬ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುವಂತಿಲ್ಲ. ಯಾರಾದರೂ ಹೋದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರಂತೆ ಗ್ರಾಮಸ್ಥರು.

ಕೂಲಿಕಾರ್ಮಿಕರು ಜಮೀನಿನ ಕೆಲಸಕ್ಕೆ ಬಾರದ ಕಾರಣ ರೇಷ್ಮೆ ಬೆಳೆ ಮತ್ತು ಚೆಂಡು ಮಲ್ಲಿಗೆ ನೆಲೆ ಕಚ್ಚಿದೆ‌. ರೇಷ್ಮೆ ಗೂಡಿನ ಮನೆಯಲ್ಲಿ ಹುಳುಗಳು ಕೊಳೆತು ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಕುಟುಂಬ‌ ಕಂಗಾಲಾಗಿದೆ‌. ಸ್ವಪ್ರತಿಷ್ಠೆಯ ದ್ವೇಷಕ್ಕಾಗಿ ಸಾಮಾಜಿಕ ಬಹಿಷ್ಕಾರ ಹೇರಿರುವುದರಿಂದ, ನ್ಯಾಯಕ್ಕಾಗಿ ನಂಜನಗೂಡಿನ ತಹಶೀಲ್ದಾರ್ ಕಚೇರಿಯ ಕದತಟ್ಟಿದ್ದಾರೆ ಕುಟುಂಬಸ್ಥರು.

ಸಾಮಾಜಿಕ ಬಹಿಷ್ಕಾರದಿಂದ ನೊಂದು ಬೆಂದಿರುವ ಕುಟುಂಬ ತಹಶೀಲ್ದಾರ್​ ಮೂಲಕ ರಾಜ್ಯಪಾಲರ ಬಳಿ‌ ದಯಾಮರಣಕ್ಕೆ ಮನವಿ ಮಾಡಲು ನಿರ್ಧರಿಸಿದೆ. ನ್ಯಾಯ ಸಿಗದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಕುಟುಂಬಸ್ಥರು ನಿರ್ಧಾರ ಮಾಡಿಕೊಂಡಿದ್ದಾರೆ.

ABOUT THE AUTHOR

...view details