ಮೈಸೂರು :ಮೊದಲ ಗಂಡನಿಂದ ವಿಚ್ಛೇದನ ಪಡೆದು ಮರು ಮದುವೆಯಾದ ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದ ಬಗ್ಗೆ ಎನ್‌ಆರ್‌ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2021ರ ಜುಲೈ 1ರಲ್ಲಿ ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಕಾರ್ಪೊರೇಟರ್ ಹಾಜಿರಾ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಕೆ ಸಿ ಶೌಕತ್ ಪಾಷಾ ಅವರ ಪುತ್ರ ಏದ್ ಶಾ ಮೊಹಮ್ಮದ್ ಎಂಬುವನೊಂದಿಗೆ ಸುಹಾ ಎಂಬ ಯುವತಿ ಮದುವೆಯಾಗಿದ್ದರು.
ಗಂಡ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಸುಹಾ ಆರೋಪ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿ, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆ ಹಿನ್ನೆಲೆ :ಘಟನೆ ಬಗ್ಗೆ ಸುಹಾ ಸ್ನೇಹಿತೆ ರೇವತಿ ರಾಜೇಂದ್ರ ಮಾತನಾಡಿ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸುಹಾ ನಮ್ಮ ಸಂಘಟನೆಯ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಇವಳಿಗೆ ಮದುವೆಯಾಗಿದೆ. ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ದೂರ ದೂರ ಇರುತ್ತಾರೆ. ಇವಳು ಸ್ಪುರದ್ರೂಪಿ, ಉತ್ತಮ ಶಿಕ್ಷಣ ಪಡೆದಿದ್ದು, ಕ್ರಿಯಾಶೀಲಳಾಗಿರುತ್ತಾಳೆ.
ಸುಹಾಳನ್ನು ದೈಹಿಕವಾಗಿ ಬಳಸಿಕೊಳ್ಳುವ ದುರುದ್ದೇಶದಿಂದ ಏದ್ ಶಾ ಮೊಹಮ್ಮದ್ ಸ್ನೇಹ ಮಾಡಿದ್ದಾರೆ. ಆಕೆಯ ಗಂಡನ ಜೊತೆ ಇರುವ ವೈಮನಸ್ಸನ್ನು ಜಾಸ್ತಿ ಮಾಡಿ, ನಾನು ಇದ್ದೇನೆ ಎನ್ನುವ ಭರವಸೆ ನೀಡಿ, ಮೊದಲ ಗಂಡನಿಂದ ವಿಚ್ಛೇದನ ಕೊಡಿಸಿ, ಮರು ಮದುವೆಯಾಗಿದ್ದಾನೆ.
ಮದುವೆಯಾದ ದಿನದಿಂದ ನನಗೆ 10 ಲಕ್ಷ ರೂ.ಬೇಕು. ನನಗೆ ಬ್ಯುಸಿನೆಸ್‌ನಲ್ಲಿಸಮಸ್ಯೆಯಾಗಿದೆ. ತಕ್ಷಣ ಹಣ ಬೇಕು ಎಂದು ಒತ್ತಾಯಿಸಿದ್ದು, ಆಕೆ ತನ್ನ ಒಡವೆಯನ್ನು ಅಡ ಇಟ್ಟು ಹಣ ನೀಡುವುದಾಗಿ ಮಾತು ಕೊಟ್ಟಿದ್ದಾಳೆ.
ಒಡವೆ ಇಟ್ಟರೆ 5 ಲಕ್ಷ ರೂ. ಹಣ ಬರುತ್ತದೆ ಎಂದು ಗೊತ್ತಾದ ನಂತರ ಅವನು 10 ಲಕ್ಷ ರೂ.ಬೇಕೆಂದು ಒತ್ತಾಯಿಸಿದ್ದ. ಆಕೆಗೆ ಹಣ ಹೊಂದಿಸಲು ಕಷ್ಟವಾಗಿದೆ. ಹಣ ಸಿಗುವುದು ತಡವಾದಾಗ ಮದುವೆಯಾದ ಒಂದು ವಾರಕ್ಕೆ ನಾಪತ್ತೆಯಾಗಿದ್ದಾನೆ.
ಇದರಿಂದ ನೊಂದ ಸುಹಾ ಸತತವಾಗಿ ಆತನಿಗೆ ಕರೆ ಮಾಡಿದಾಗ ಹುಡುಗನ ತಂದೆ ನಗರ ಪಾಲಿಕೆ ಮಾಜಿ ಸದಸ್ಯ ಕೆ ಸಿ ಶೌಕತ್ ಪಾಷಾ ಕರೆ ಸ್ವೀಕರಿಸಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ರೇವತಿ ರಾಜೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ಹಾಗೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.