ಮೈಸೂರು: "ಡಿಸೆಂಬರ್ 7ರಿಂದ 10ರವರೆಗೆ 4 ದಿನಗಳ ಕಾಲ ನಡೆಯುವ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನವನ್ನು ನಗರದ ಸಿಎಫ್ಟಿಆರ್ಐ ಆವರಣದಲ್ಲಿ ಆಯೋಜನೆ ಮಾಡಲಾಗಿದೆ" ಎಂದು ಲಕ್ನೋದ ಸಿಎಸ್ಐಆರ್/ಐಐಟಿಆರ್ ನಿರ್ದೇಶಕ ಡಾ.ಎನ್.ಭಾಸ್ಕರ್ ತಿಳಿಸಿದರು. ಮೈಸೂರಿನಲ್ಲಿಂದು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಅವರು, "ಅಂತಾರಾಷ್ಟ್ರೀಯ ಆಹಾರ ಸಮ್ಮೇಳದ ಉದ್ಘಾಟನಾ ಸಮಾರಂಭ 7ನೇ ತಾರೀಖಿನಂದು ನಡೆಯಲಿದೆ. ಸಾರ್ವಜನಿಕರರಿಗಾಗಿ ಫುಡ್ ಎಕ್ಸ್ಪೋ ಮಾಡುತ್ತಿದ್ದೇವೆ" ಎಂದರು.
"ಆಹಾರ ಶುದ್ಧತೆ, ಆಹಾರ ಸಂಸ್ಕರಣೆ ಮತ್ತು ಈ ಕುರಿತ ಟೆಕ್ನಾಲಜಿಯನ್ನು ಸಮ್ಮೇಳನದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸಿಎಫ್ಟಿಆರ್ಐ ಸಂಸ್ಥಾಪಕರು ಡಾ.ವಿ.ಸುಭ್ರಮಣ್ಯಂ ಸ್ಥಾಪಿಸಿದ ಸಂಘ ಇದಾಗಿದೆ. ಪ್ರತಿ 5 ವರ್ಷಕೊಮ್ಮೆ ನಡೆಯುವ ಸಮ್ಮೇಳನಕ್ಕೆ ಈ ಬಾರಿ ಸುಮಾರು 23 ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಪ್ರತಿನಿಧಿಗಳು ಸಮ್ಮೇಳನದಲ್ಲಿ ಆಹಾರದ ಬಗ್ಗೆ ಮಾತನಾಡುತ್ತಾರೆ. ಡಿ.8 ಮತ್ತು 9ರಂದು ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಎಲ್ಲರೂ ಬಂದು ವೀಕ್ಷಿಸಬಹುದು. ಇದಲ್ಲದೆ ಜರ್ನಲ್ ಆಫ್ ಗ್ರೇನ್ ಸೈನ್ಸ್ ಟೆಕ್ನಾಲಜಿ ಎಂಬ ಜರ್ನಲ್ ಅನ್ನು ಉದ್ಘಾಟನಾ ಸಮಾರಂಭದಲ್ಲಿ ಅನಾವರಣ ಮಾಡುತ್ತಿದ್ದೇವೆ" ಎಂದು ಹೇಳಿದರು.