ಮೈಸೂರು:ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ಸರ್ಕಾರ ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ, ಮೂರು ದಿನಗಳಲ್ಲಿ 80 ಲಕ್ಷ ದಂಡ ಸಂಗ್ರಹವಾಗಿದ್ದು, ದಂಡ ಕಟ್ಟಲು ಸವಾರರು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಸ್ವಯಂ ಪ್ರೇರಿತರಾಗಿ ದಂಡ ಕಟ್ಟಿದ್ದು ವಿಶೇಷವಾಗಿದೆ.
ಸ್ವಯಂ ಪ್ರೇರಿತರಾಗಿ ಕಚೇರಿಗೆ ಬಂದು ದಂಡ ಪಾವತಿ:ಸಂಚಾರಿ ನಿಯಮಗಳನ್ನು ಮೈಸೂರು ನಗರದಲ್ಲಿ ಉಲ್ಲಂಘನೆ ಮಾಡಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ, ರಾಜ್ಯ ಸರ್ಕಾರ ಬೆಂಗಳೂರಿನಂತೆ ಮೈಸೂರಿನಲ್ಲೂ ಶೇ.50 ರಷ್ಟು ರಿಯಾಯಿತಿ ಘೋಷಣೆ ಮಾಡಿತ್ತು. ಈ ಬೆನ್ನಲ್ಲೇ, ಕಳೆದ ಮೂರು ದಿನಗಳಿಂದ, ಅಂದರೆ ಫೆಬ್ರವರಿ 3 ಶುಕ್ರವಾರ, ಫೆಬ್ರವರಿ 4 ಶನಿವಾರ ಹಾಗೂ ಫೆಬ್ರವರಿ 5 ಭಾನುವಾರ ರಾತ್ರಿವರೆಗೆ, 38,149 ಪ್ರಕರಣಗಳಿಗೆ ಸಂಬಂಧಿಸಿದಂತೆ 80,82,900 ರೂಪಾಯಿ ದಂಡವನ್ನು ಸಂಗ್ರಹಿಸಿದ್ದು, ದಂಡ ಕಟ್ಟಲು ಸವಾರರು ಸ್ವಯಂ ಪ್ರೇರಿತರಾಗಿ ಪೊಲೀಸ್ ಕಚೇರಿಗೆ ಬಂದು ಪ್ರಕರಣಕ್ಕೆ ಅಂತ್ಯ ಹಾಡುತ್ತಿದ್ದಾರೆ.
ಫೆಬ್ರವರಿ 11 ಕೊನೆಯ ದಿನ:ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ, ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಫೆಬ್ರವರಿ 11 ಒಳಗೆ ದಂಡ ಕಟ್ಟಿದವರಿಗೆ ಮಾತ್ರ ಈ ರಿಯಾಯಿತಿ ಅನ್ವಯ ಆಗಲಿದೆ. ದಂಡ ಪಾವತಿ ಮಾಡುವ ವಾಹನ ಸವಾರರು ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸೆಂಟರ್ನಲ್ಲಿ ವಾಹನ ಪರಿಶೀಲನೆ ಮಾಡುವ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಬಳಿ, ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಗೂ ಸಂಚಾರಿ ಠಾಣೆಗಳ ಬಳಿ ದಂಡ ಪಾವತಿಸಬಹುದು. ದಂಡ ಪಾವತಿಲಸು ಬೆಳಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಅವಕಾಶ ಇದೆ ಎಂದು ಸಂಚಾರಿ ವಿಭಾಗದ ಎಸಿಪಿ ಪರಶುರಾಮಪ್ಪ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಸ್ವಯಂ ಪ್ರೇರಿತರಾಗಿ ದಂಡ ಕಟ್ಟಿದ ಶಾಸಕ ನಾಗೇಂದ್ರ:ಮೈಸೂರು ನಗರದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ತಮಗೆ ಸೇರಿದ ಕಾರನ್ನು ನಗರದ ಮೆಟ್ರೋಪೋಲ್ ಸಂಚಾರಿ ಪೊಲೀಸರ ಬಳಿ ತೆರಳಿ ತಪಾಸಣೆ ಮಾಡಿದಾಗ, ವೇಗದ ಚಾಲನೆಗೆ ಸಂಬಂಧಿಸಿದಂತೆ ಸುಮಾರು 7 ಸಾವಿರ ರೂಪಾಯಿ ದಂಡ ಬಾಕಿ ಇತ್ತು. ಹೀಗಾಗಿ ಸ್ಥಳದಲ್ಲೇ ಮೂರು ಸಾವಿರದ ಐದು ನೂರು ರೂಪಾಯಿ ದಂಡ ಪಾವತಿಸಿ ಮೈಸೂರು ಪೊಲೀಸರಿಂದ ರಶೀದಿ ಪಡೆದರು. ಆ ಮೂಲಕ ಸರ್ಕಾರ ಘೋಷಣೆ ಮಾಡಿದ್ದ ಶೇಕಡಾ 50 ರಷ್ಟು ರಿಯಾಯಿತಿಯನ್ನು ಶಾಸಕ ನಾಗೇಂದ್ರ ಪಡೆದು, ಇತರರಿಗೂ ಮಾದರಿಯಾದರು.
ಇದನ್ನೂ ಓದಿ:ಶೇ50ರಷ್ಟು ರಿಯಾಯಿತಿ ಎಫೆಕ್ಟ್: ಎರಡನೇ ದಿನವೂ ಕೋಟಿ ಕೋಟಿ ಸಂಚಾರಿ ದಂಡ ಪಾವತಿ