ಬೆಂಗಳೂರು: ನನ್ನ ಜೀವನವೇ ಒಂದು ವಿಶಿಷ್ಟವಾದ ಬ್ಲೆಂಡ್ ಆಗಿದೆ. ನಾನೊಬ್ಬ ಕಾಫಿ ಬೆಳೆಗಾರನ ಮಗ ಮತ್ತು ವೃತ್ತಿಪರ ಟೆನ್ನಿಸ್ ಆಟಗಾರನಾಗಿ ಎರಡೂ ಕ್ಷೇತ್ರಗಳ ನಡುವೆ ಸೇತುವೆಯಾಗಿದ್ದೇನೆ. ಕೊಡಗಿನ ಕಾಫಿ ತೋಟಗಳ ಸುಂದರ ರಮಣೀಯ ಸೌಂದರ್ಯದ ನಡುವೆ ಬೆಳೆದಿರುವ ನಾನು, ನನ್ನ ಟೆನ್ನಿಸ್ ವೃತ್ತಿ ಜೀವನವನ್ನು ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿ ಕಾಫಿಯೊಂದಿಗೆ ಆಳವಾದ ಬೆಸುಗೆಯನ್ನು ಕೂಡ ಹೊಂದಿದ್ದೇನೆ ಎಂದು ವಿಶ್ವ ವಿಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ತಿಳಿಸಿದರು.
ಇಂಟರ್‌ನ್ಯಾಷನಲ್ ಕಾಫಿ ಆರ್ಗನೈಸೇಶನ್, ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ಭಾರತೀಯ ಕಾಫಿ ಮಂಡಳಿ, ಕರ್ನಾಟಕ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದಲ್ಲಿ ಬೆಂಗಳೂರು ಅರಮನೆಯಲ್ಲಿ ಸೆಪ್ಟಂಬರ್ 25 ರಿಂದ 28 ರವರೆಗೆ 5ನೇ ವಿಶ್ವ ಕಾಫಿ ಸಮ್ಮೇಳನ 2023 ಅನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ಕಾರ್ಯಕ್ರಮದ ಲೋಗೋ, ವಿಷಯ ಮತ್ತು ಕಾಫಿ ಕ್ಷೇತ್ರದ ನಿರೀಕ್ಷೆಗಳನ್ನು ಘೋಷಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವಿಶ್ವ ಕಾಫಿ ಸಮ್ಮೇಳನದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರುವ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮಾತನಾಡಿ, ಪ್ರತಿಷ್ಠಿತವೆನಿಸಿರುವ ಕಾಫಿ ಸಮ್ಮೇಳನದ ಭಾಗವಾಗುತ್ತಿರುವುದಕ್ಕೆ ನನಗೆ ರೋಮಾಂಚನ ಮತ್ತು ಹೆಮ್ಮೆ ಎನಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಕಾಫಿ ತಾಣವಾಗಿ ಭಾರತ ತನ್ನನ್ನು ತಾನು ಗುರುತಿಸಿಕೊಂಡಿರುವ ಈ ಸಂದರ್ಭದಲ್ಲಿ ಸಮ್ಮೇಳನ ಉತ್ತಮ ಭರವಸೆಯನ್ನು ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಕಾಫಿ ಮಂಡಳಿ ಸಿಇಒ ಮತ್ತು ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ ಮಾತನಾಡಿ ಡಬ್ಲೂಸಿಸಿ 2023 ಅನ್ನು ಏಷ್ಯಾದಲ್ಲಿ ಮೊದಲ ಬಾರಿ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಭಾರತದ ಕಾಫಿ ಬೆಳೆಗಾರರಿಗೆ ಅಪಾರವಾದ ಪ್ರಯೋಜನ ಆಗಲಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಪ್ರಚಾರ ಮಾಡುವ ಮೂಲಕ ಈ ಸಮ್ಮೇಳನ ನಮ್ಮ ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳು ಮತ್ತು ಮಾರುಕಟ್ಟೆಗಳನ್ನು ಸೃಷ್ಟಿ ಮಾಡಲಿದೆ. ಒಟ್ಟಾರೆಯಾಗಿ ಈ ಸಮ್ಮೇಳನ ಜಾಗತಿಕ ಕಾಫಿ ಕ್ಷೇತ್ರಕ್ಕೆ ಉತ್ತಮ ಭರವಸೆಯನ್ನು ಒದಗಿಸಲಿದೆ. ಅದರಲ್ಲೂ ವಿಶೇಷವಾಗಿ ಭಾರತೀಯ ಕಾಫಿ ಉದ್ಯಮ ಮತ್ತು ಅದರ ಶ್ರೀಮಂತ ಪರಂಪರೆಯನ್ನು ಜಗತ್ತಿನೆದುರು ತೆರೆದಿಡಲಿದೆ ಎಂದು ಡಾ.ಕೆ.ಜಿ.ಜಗದೀಶ ಅಭಿಪ್ರಾಯಪಟ್ಟರು