ಮೈಸೂರು: ಪ್ರತಿದಿನ ಮೈಸೂರು ಜಿಲ್ಲೆಯಲ್ಲಿ 450 ರಿಂದ 500 ಕೊರೊನಾ ಟೆಸ್ಟ್ ನಡೆಯುತ್ತಿದ್ದು, ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲು 90 ಪ್ರಕರಣ ಕಂಡುಬಂದ ನಂತರ, ನಿನ್ನೆಯವರೆಗೆ 8 ಪ್ರಕರಣ ದಾಖಲಾಗಿದೆ. ಅದರಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದು, 6 ಪ್ರಕರಣಗಳು ಸಕ್ರಿಯವಾಗಿವೆ. ಮುಂಬೈನಿಂದ ಬಂದ ತಾಯಿ-ಮಗಳಿಗೆ ಪಾಸಿಟಿವ್ ಇದ್ದ ಕಾರಣ ಮಗಳು ಗರ್ಭಿಣಿಯಾಗಿದ್ದು, ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಈ ಮಹಿಳೆಯ ಗಂಡ ಮುಂಬೈನಿಂದ ಬಂದಿದ್ದು ಅವನನ್ನ ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈವರೆಗೆ ಮಹಾರಾಷ್ಟ್ರದಿಂದ ಬಂದವರನ್ನು ಬಿಟ್ಟು ಉಳಿದ ರಾಜ್ಯಗಳಿಂದ ಆಗಮಿಸಿದವರನ್ನು ಪರೀಕ್ಷೆಗೆ ಒಳಪಡಿಸಿ ನಂತರ ಅವರನ್ನು ಹೋಮ್ ಕ್ವಾರಂಟೈನ್ ಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಪ್ರತಿದಿನ ನಾವು 450 ರಿಂದ 500 ಟೆಸ್ಟ್ ಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜ್ವರ, ನೆಗಡಿ ಇರುವವರು ಸರ್ಕಾರಿ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕು. ಟೆಸ್ಟ್ಅನ್ನು ಉಚಿತವಾಗಿ ಮಾಡಲಾಗುತ್ತಿದೆ. ನಮ್ಮಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಿಲ್ಲ. ಜೊತೆಗೆ ತಮಿಳುನಾಡು ಹಾಗೂ ಕೇರಳದಿಂದ ಬಂದವರಲ್ಲಿ ಸಹ ಪಾಸಿಟಿವ್ ಪ್ರಕರಣ ಅಷ್ಟಾಗಿ ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ 200 ಜನ ಮಾತ್ರ ಹೋಮ್ ಕ್ವಾರಂಟೈನ್ ನಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ವಿವರಿಸಿದರು.