ಮೈಸೂರು :ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ನಿರ್ಮಾಣವಾಗಿದ್ದ 50 ಬೆಡ್ವುಳ್ಳ ದವಾಖಾನೆ ಈಗ ಬರೀ ಹೆಸರಿಗಷ್ಟೇ ಸುಸಜ್ಜಿತ ಆಸ್ಪತ್ರೆಯಾಗಿದೆ. ಇಲ್ಲಿ ವೈದ್ಯರೇ ಇಲ್ಲದೇ ನರ್ಸ್ ಒಬ್ಬರೇ ಎಲ್ಲಾ ಕೆಲಸ ಮಾಡುವಂತಾಗಿದೆ.
ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ, ಪ್ರಸ್ತುತ ಅವರ ಪುತ್ರ ಡಾ. ಯತೀಂದ್ರ ಅವರು ಶಾಸಕರಾಗಿರುವ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿನ ಹೊಸಕೋಟೆಯ 24x7 ಆಸ್ಪತ್ರೆ ದುಸ್ಥಿತಿ. ಈ ಆಸ್ಪತ್ರೆಯನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸುತ್ತಮುತ್ತಲ 16 ಗ್ರಾಮಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಂಜೂರು ಮಾಡಿದ್ದರು. ಅಲ್ಲದೆ, ನಿರ್ಮಾಣದ ಬಳಿಕ ಇದರ ಉದ್ಘಾಟನೆಯನ್ನು ಸಹ ನೆರವೇರಿಸಿದ್ದರು.
ಆದರೆ, ಈ ಆಸ್ಪತ್ರೆಗೆ ಕಳೆದ 2 ವರ್ಷಗಳಿಂದ ಎಂಬಿಬಿಎಸ್ ಮಾಡಿದ ವೈದ್ಯರೇ ಬಂದಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಒಬ್ಬರೇ ನರ್ಸ್ ಇದ್ದು, ಒಬ್ಬರು ಆಯುರ್ವೇದ ವೈದ್ಯರಿದ್ದಾರೆ. ಆದ್ರೆ ಪ್ರತಿ ತಿಂಗಳು 40 ಜನ ಹೆರಿಗೆಗಾಗಿ ಬರುತ್ತಾರೆ. ಇವರುಗಳಲ್ಲಿ ಸಾಮಾನ್ಯ ಹೆರಿಗೆಗಳನ್ನು ನರ್ಸ್ ಮಾಡಿಸುತ್ತಾರೆ. ಉಳಿದ ಜನರನ್ನು ಮೈಸೂರಿಗೆ ಕಳಿಸಿಕೊಡುತ್ತೇವೆ ಎಂದು ಹೇಳುತ್ತಾರೆ ನರ್ಸ್ ಶಕುಂತಲಾ.
ಸುಸಜ್ಜಿತ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ
ಇನ್ನು, ಕ್ರಿಟಿಕಲ್ ಆದ ಹೆರಿಗೆಯನ್ನು ಆಯುರ್ವೇದಿಕ್ ವೈದ್ಯರೇ ಕೆಲವು ಸಂದರ್ಭಗಳಲ್ಲಿ ಮಾಡಿಸುತ್ತಾರಂತೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳಿದ್ದರೂ ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿಂದ ಇದ್ದು ಇಲ್ಲದಂತಾಗಿದೆ. ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.