ಸಂಸದ ಪ್ರತಾಪ ಸಿಂಹ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಮೈಸೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಈಗಿನ ಸರ್ಕಾರಕ್ಕೆ ರಾಜ್ಯದ ರೈತರ ಹಿತಕ್ಕಿಂತ ತಮಿಳುನಾಡು ಸರ್ಕಾರದ ಜೊತೆಗೆ ರಾಜಕೀಯ ಮೈತ್ರಿಯೇ ಮುಖ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ನಂತರದ ಕಾವೇರಿ ನದಿ ನೀರಿನ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿಗೆ ನೀರು ಬಿಡಬೇಡಿ, ವಾಸ್ತವ ಸ್ಥಿತಿಯನ್ನು ಕೋರ್ಟ್ ನ ಮುಂದಿಡಿ ಎಂದು ಸರ್ಕಾರಕ್ಕೆ ನಾನು ಹೇಳಿದ್ದೆನು. ಮೊನ್ನೆಯ ಸಭೆಯಲ್ಲೂ ಅದನ್ನೇ ಹೇಳಿದ್ದೆನು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿ ಬೇಕಾಗಿಲ್ಲ. ತಮಿಳುನಾಡಿನ ಸ್ಟಾಲಿನ್ ಅವರ ಡಿಎಂಕೆ ಸರ್ಕಾರದ ಜೊತೆಗೆ ರಾಜಕೀಯ ಮೈತ್ರಿಯೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ರೈತರ ಹಿತ ಕಡೆಗಣನೆ:ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಸಲುವಾಗಿ ರಾಜ್ಯದ ರೈತರ ಹಿತವನ್ನು ಹಾಳು ಮಾಡುತ್ತಿದ್ದಾರೆ. ರಾಜ್ಯದ ಜನ 135 ಸೀಟು ಕೊಟ್ಟಿದ್ದಾರೆ. ಇನ್ನೂ 5 ವರ್ಷ ಯಾರು ಏನು ಮಾಡೋಕಾಗಲ್ಲ ಎಂದುಕೊಂಡಿದ್ದಾರೆ. ಇದೇ ತರಹ ನೀರು ಬಿಡುವುದನ್ನು ಮುಂದುವರಿಸಿದರೆ ಬೆಂಗಳೂರು, ಮೈಸೂರು, ಮಂಡ್ಯ ಎಲ್ಲ ಕಡೆ ಕುಡಿಯುವ ನೀರಿಗೂ ಹಾಹಾಕಾರ ಬರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಮೋದಿ ಬದಲು ಸ್ಟಾಲಿನ್ಗೆ ಕರೆ ಮಾಡಲಿ : ಸರ್ವಪಕ್ಷಗಳ ಸಭೆಗೆ ಪ್ರಧಾನಿ ಮೋದಿಯವರು ಸಮಯ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಒಬ್ಬ ಜನಪ್ರತಿನಿಧಿಗೆ ಸಾಮಾನ್ಯ ಜ್ಞಾನ ಇರಬೇಕು. ಮೋದಿ ಅಲ್ಲ, ಮನಮೋಹನ್ ಸಿಂಗ್ ಬಂದರೂ ಈ ವಿಚಾರದಲ್ಲಿ ಏನು ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಈ ವಿಚಾರದ ಬಗ್ಗೆ ಡಿಸೈಡ್ ಮಾಡಬೇಕು. ಪ್ರಧಾನಿ ಬದಲು ಸ್ಟಾಲಿನ್ಗೆ ಕರೆ ಮಾಡಿ ನೀರು ಬಿಡಲು ಆಗುವುದಿಲ್ಲ ಎಂದು ಹೇಳಲಿ. ಇವರಿಗೆ ಲೋಕಸಭಾ ಚುನಾವಣೆ ಮುಖ್ಯವೇ ಅಥವಾ ರಾಜ್ಯದ ರೈತರ ಹಿತಾಸಕ್ತಿ ಮುಖ್ಯವೇ ಎಂದು ಪ್ರತಾಪ್ ಸಿಂಹ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಈಗಲೂ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸಂಸದರು, ಈಗಲೂ ಡ್ಯಾಂಗೆ ಹೋಗಿ ಹೊರ ಹರಿವು ಪರೀಕ್ಷೆ ಮಾಡಲಿ, ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ. ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ಸೆಪ್ಟೆಂಬರ್ 13 ರಿಂದ ಹರಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ದಸರಾ ಸಂಪ್ರದಾಯ ಮುರಿಯುವುದು ಬೇಡ: ಅದ್ಧೂರಿ, ಸರಳ ದಸರಾ ಆಚರಣೆ ಚರ್ಚೆಯ ವಿಚಾರದಲ್ಲಿ ನಾನಿಲ್ಲ. ಸಾಂಪ್ರದಾಯಿಕವಾಗಿ ದಸರಾ ಮಾಡಲಿ. ದಸರಾ ಮಾಡುವಾಗ ಒಂದಷ್ಟು ಹಣ ಖರ್ಚಾಗುತ್ತದೆ. ಅಂದ ಮಾತ್ರಕ್ಕೆ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಮುರಿಯುವುದು ಬೇಡ. ದಸರಾ ಎಂದರೆ ಜಂಬೂಸವಾರಿ, ದೀಪಾಲಂಕಾರ, ಕ್ರೀಡೆ ಮತ್ತು ಗೋಷ್ಠಿಗಳು ಇರುತ್ತವೆ. ಇದಕ್ಕೆಲ್ಲ ಖರ್ಚು ಆಗೇ ಆಗುತ್ತದೆ. ಬರ ಇದೆ ಎನ್ನುತ್ತ ಸಂಪ್ರದಾಯ ಮುರಿಯುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಚೈತ್ರಾ ಕುಂದಾಪುರ ಅವರ ವಿಚಾರವಾಗಿ ಸಂಸದರನ್ನು ಮಾಧ್ಯಮದವರು ಕೇಳಿದಾಗ ಚೈತ್ರಾ ಕುಂದಾಪುರ ಯಾರು ಎಂದು ನನಗೆ ಗೊತ್ತಿಲ್ಲ, ಅವರ ವಿಚಾರವೂ ನನಗೆ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಏನೂ ಕೇಳಬೇಡಿ ಎಂದು ಪ್ರತಿಕ್ರಿಯೆ ನೀಡಿದರು.
ದೇವೇಗೌಡರ ಕಾಲಿಗೆ ಬಿದ್ದಿದ್ದನ್ನು ವೈಭವೀಕರಿಸುವುದು ಅಗತ್ಯವಿಲ್ಲ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕಾಲಿಗೆ ಬಿದ್ದ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾನು ಎಲ್ಲರ ಕಾಲಿಗೂ ನಮಸ್ಕಾರ ಮಾಡುತ್ತೇನೆ. ನಾನು ಸಿದ್ದರಾಮಯ್ಯನವರ ಕಾಲಿಗೂ ನಮಸ್ಕರಿಸಿದ್ದೇನೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಾಲಿಗೂ ನಮಸ್ಕರಿಸಿದ್ದೇನೆ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕಾಲಿಗೂ ನಮಸ್ಕರಿಸಿದ್ದೇನೆ.
ದೊಡ್ಡವರ ಕಾಲಿಗೆ ನಮಸ್ಕರಿಸುವುದು ನನ್ನ ರೂಢಿ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು. ಅವರಷ್ಟು ಕೆಲಸ ಮಾಡಿದವರು ಬೆರೊಬ್ಬರಿಲ್ಲ. ಮೋದಿಯವರೇ ದೇವೇಗೌಡರವರನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಾರೆ. ನಾನು ಹಿರಿಯರಿಗೆ ಗೌರವ ಕೊಡುತ್ತೇನೆ, ಆ ಹಿನ್ನೆಲೆ ದೇವೇಗೌಡರ ಕಾಲಿಗೆ ಬಿದ್ದು ನಮಸ್ಕರಿಸಿದೆ. ಅದಕ್ಕೆ ಬೇರೆ ಅರ್ಥ ಬೇಡ ಎಂದರು.
ಇದನ್ನೂಓದಿ:ಮೈಸೂರು ದಸರಾ - 2023 : ಈ ಬಾರಿಯ ನಾಡಹಬ್ಬದ ಆಚರಣೆಯ ಸಂಪೂರ್ಣ ಮಾಹಿತಿ