ಕರ್ನಾಟಕ

karnataka

ETV Bharat / state

ಮೈಸೂರು: ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಸಾವು - ಗೃಹಿಣಿ ಆತ್ಮಹತ್ಯೆ

ಮೈಸೂರಿನಲ್ಲಿ ಭಾನುವಾರ ಅಪಘಾತ, ಆತ್ಮಹತ್ಯೆ ಸೇರಿ ಒಟ್ಟು ನಾಲ್ಕು ಅಪರಾಧ ಪ್ರಕರಣಗಳು ದಾಖಲಾಗಿವೆ.

Criminal cases
ಅಪರಾಧ ಪ್ರಕರಣಗಳು

By

Published : May 29, 2023, 11:04 AM IST

ಮೈಸೂರು: ವಿಜಯನಗರ ವಾಟರ್ ಟ್ಯಾಂಕ್ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿನ ನೀರಿನ ಸಂಪ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕೆ.ಎಂ. ಚೆರಿಯನ್ ಅವರ ಪುತ್ರ ಕ್ರಿಸ್ಟೋ ಚೆರಿಯನ್ (35) ಎಂದು ಗುರುತಿಸಲಾಗಿದೆ. ಪುತ್ರನ ಸಾವಿಗೆ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಮೊದಲನೇ ಹಂತದ ನಿವಾಸಿ ಕ್ರಿಸ್ಟೋ ಚೆರಿಯನ್ ಅವರು ಶನಿವಾರ ರಾತ್ರಿ ಮನೆಯಿಂದ ಹೊರ ತೆರಳಿದ್ದರು. ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಬೆಳಗ್ಗೆ ಕುಟುಂಬದವರು ಹುಡುಕುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಲರ್ನರ್ ಪಿಯು ಕಾಲೇಜು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿನ ನೀರಿನ ಸಂಪ್‌ನಲ್ಲಿ ಕ್ರಿಸ್ಟೋ ಚೆರಿಯನ್ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ.

ಅಪಘಾತದಲ್ಲಿ ಇಬ್ಬರು ಸಾವು: ಮೈಸೂರು- ಬೆಂಗಳೂರು ರಸ್ತೆಯ ಕಳಸ್ತವಾಡಿ ಗೇಟ್ ಬಳಿ ಬೈಕ್​ ಮತ್ತು ಕ್ಯಾಂಟರ್ ಲಾರಿ ನಡುವೆ ಅಪಘಾತ ಸಂಭವಿಸಿ ಯುವಕರಿಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಕೇರಳ ಮೂಲದ ಪಿ.ಎಸ್.ನಿತಿನ್ (21), ಶಾಹಿನ್ ಶಾಜನ್ (21) ಮೃತರು. ಈ ಇಬ್ಬರು ಬೈಕಿನಲ್ಲಿ ಶ್ರೀರಂಗಪಟ್ಟಣದ ಕಡೆಯಿಂದ ಮೈಸೂರಿಗೆ ಬರುತ್ತಿದ್ದರು.

ರಸ್ತೆ ಮಧ್ಯೆ ಮುಂದೆ ಸಾಗುತ್ತಿದ್ದ ಕ್ಯಾಂಟರ್ ಲಾರಿ ಚಾಲಕ ಹಿಂದೆ ಬರುತ್ತಿದ್ದ ವಾಹನವನ್ನು ಗಮನಿಸದೇ ನಿರ್ಲಕ್ಷ್ಯದಿಂದ ಎಡಕ್ಕೆ ತಿರುಗಿಸಿದ್ದಾನೆ. ಇದರಿಂದ ಕ್ಯಾಂಟರ್​ ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಬೈಕ್​ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಸತ್ತು ಗೃಹಿಣಿ ಆತ್ಮಹತ್ಯೆ: ಕ್ಷುಲ್ಲಕ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ (27) ಮೃತ ದುರ್ದೈವಿ. ಆಕಲ ಗ್ರಾಮದಿಂದ ದೇವರಮ್ಮನಹಳ್ಳಿ ಗ್ರಾಮದ ಜಗದೀಶ್ (30) ಎಂಬ ವ್ಯಕ್ತಿಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ನಾಲ್ಕು ವರ್ಷದ ಹೆಣ್ಣು ಮಗುವಿದ್ದು, ನಿನ್ನೆ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಬಳಿಕ ಗಂಡ ಹೆಂಡತಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿ ಗೃಹಿಣಿ ಬೇಸತ್ತು ಪತಿ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಭಾನುವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಗಾಗ್ಗೆ ಗಂಡ ಹೆಂಡತಿ ನಡುವೆ ಗಲಾಟೆಗಳು ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶಿವನಂಜ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿ 2 ಪ್ರತ್ಯೇಕ ಪ್ರಕರಣ: ಓರ್ವನ ಕೊಲೆ, ನೀರಿನಲ್ಲಿ ಮುಳುಗಿ ಬಾಲಕ ಸಾವು

ABOUT THE AUTHOR

...view details