ಮೈಸೂರು: ವಿದೇಶಗಳಲ್ಲಿ ಬಹು ಬೇಡಿಕೆಯಿರುವ ತಿಮಿಂಗಿಲದ ವಾಂತಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ಬಂಧಿತರು ಸಮುದ್ರದಲ್ಲಿ ಅಪರೂಪಕ್ಕೆ ಸಿಗುವ 8 ಕೆ.ಜಿ.250 ಗ್ರಾಮ್ ತೂಕದ ತಿಮಿಂಗಿಲದ ವಾಂತಿ ಅಂದರೆ ಅಂಬ್ರಗ್ರಿಸ್ ಅನ್ನು ಅಕ್ರಮವಾಗಿ ಕುಶಾಲನಗರದಿಂದ ಸಾಗಿಸುತ್ತಿದ್ದರು.
ಕೊಡಗಿನ ಕೆ.ಎ.ಇಬ್ರಾಹಿಂ, ರಫೀಕ್, ಎಮ್.ಎ.ತಾಹೀರ್ ನಕಾಷ್ ಮತ್ತು ಕೇರಳದ ಕಣ್ಣೂರು ಜಿಲ್ಲೆಯ ಕೆ.ಎಂ ಜಾರ್ಜ್ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ಕೊಡಗಿನ ರಿಯಾಜ್ ತಲೆಮರೆಸಿಕೊಂಡಿದ್ದಾನೆ.
ಆಕ್ರಮವಾಗಿ ತಿಮಿಂಗಿಲದ ವಾಂತಿ ಸಾಗಟ ಏನಿದು ತಿಮಿಂಗಿಲದ ವಾಂತಿ?
ಸಮುದ್ರದಲ್ಲಿ ತಿಮಿಂಗಿಲವು ಜೀರ್ಣವಾಗದೇ ಉಳಿದ ವಸ್ತುವನ್ನು ಬಹಳದಿನಗಳ ನಂತರ ವಾಂತಿ ಮಾಡುತ್ತದೆ. ಅದು ಘನ ಮೇಣದ ವಸ್ತುವಿನ ರೂಪದಲ್ಲಿ ಇರುತ್ತದೆ. ಬಹಳ ದಿನಗಳ ನಂತರ ಈ ವಾಂತಿಯು ಸಮುದ್ರದ ದಡಕ್ಕೆ ಬಂದು ಸೇರುತ್ತದೆ.
ಆ ಸಂದರ್ಭದಲ್ಲಿ ಇದನ್ನು ತೆಗೆದುಕೊಂಡು ಬರುತ್ತಾರೆ. ಈ ತಿಮಿಂಗಿಲ ವಾಂತಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದ್ದು, ಸುಗಂಧ ದ್ರವ್ಯ ಹಾಗೂ ಕೆಲವು ಔಷಧ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ.
ಇಂತಹ ಅಪರೂಪದ ತಿಮಿಂಗಿಲದ ವಾಂತಿಯನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರಿನ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕುಶಾಲನಗರ ಬಳಿ ಕಾರ್ಯಾಚರಣೆ ನಡೆಸಿ 8 ಕೆ.ಜಿ. 250 ಗ್ರಾಮ್ ತೂಕದ ತಿಮಿಂಗಿಲದ ವಾಂತಿ ವಶಪಡಿಸಿಕೊಂಡಿದ್ದು, ಅದರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಪ್ರಮುಖ ಆರೋಪಿ ರಿಯಾಜ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಅರಣ್ಯ ಸಿಬ್ಬಂದಿ ಬಲೆ ಬೀಸಿದ್ದಾರೆ. ಇದು ಮೈಸೂರು ಭಾಗದಲ್ಲಿ ಪ್ರಥಮ ಪ್ರಕರಣವಾಗಿದ್ದು, ದೇಶದಲ್ಲೇ 10ನೇ ಪ್ರಕರಣ ಇದಾಗಿದೆ.