ಮೈಸೂರು: ಪಕ್ಕದ ಜಮೀನಿನ ವ್ಯಕ್ತಿಯೊಬ್ಬ ದ್ವೇಷದ ಕಾರಣಕ್ಕೆ ಮಹಿಳೆಯೊಬ್ಬರು ಬೆಳೆದಿದ್ದ ಬಾಳೆಯನ್ನು ರಾತ್ರೋರಾತ್ರಿ ಕಡಿದು ಹಾಕಿದ್ದು , ಇದೀಗ ಕಂಗಾಲಾದ ಮಹಿಳೆ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ರೈತ ಮಹಿಳೆ ಲಕ್ಷ್ಮಮ್ಮ ತನ್ನ ಜಮೀನಿನಲ್ಲಿ ಸುಮಾರು 4 ಲಕ್ಷ ಖರ್ಚು ಮಾಡಿ ಬಾಳೆ ಬೆಳೆ ಹಾಕಿದ್ದಳು. ಬೆಳೆಯೂ ಕೈಗೆ ಬರುವ ಹಂತದಲ್ಲಿತ್ತು. ಆದರೆ ಪಕ್ಕದ ಜಮೀನಿನ ವ್ಯಕ್ತಿ ರಾತ್ರಿ ವೇಳೆ ಬಂದು ಬಾಳೆ ಬೆಳೆಯನ್ನು ನಾಶಮಾಡಿದ್ದಾನೆ. ಬೆಳಿಗ್ಗೆ ಜಮೀನಿಗೆ ಹೋಗಿ ನೋಡಿದಾಗ ಬೆಳೆ ನಾಶವಾಗಿತ್ತು. ಈ ಹಿಂದೆಯೂ ಒಂದು ಬಾರಿ ಇದೇ ವ್ಯಕ್ತಿ ನೀರಿನ ಪೈಪ್ನ್ನು ಕಟ್ ಮಾಡಿ ತೊಂದರೆ ನೀಡಿದ್ದ ಎನ್ನಲಾಗಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದ ಲಕ್ಷ್ಮಮ್ಮ ಈಗ ಸಾಲ ತೀರಿಸಲು ಆಗದೆ, ಬೆಳೆ ಕೈಗೆ ಸೇರದೆ ಕಂಗಾಲಾಗಿದ್ದಾರೆ.