ಕರ್ನಾಟಕ

karnataka

ETV Bharat / state

ಅರ್ಜುನನಿಗೆ ತ್ರಿಡಿ ಪೇಂಟಿಂಗ್​ ಮೂಲಕ ಮೈಸೂರಿನ ಕಲಾವಿದನಿಂದ ನಮನ- ವಿಡಿಯೋ - ಈಟಿವಿ ಭಾರತ ಕನ್ನಡ

ಮೈಸೂರಿನ ಕಲಾವಿದ ಅನಿಲ್​ ಅವರು ಕಾಡಾನೆ ದಾಳಿಯಿಂದ ಮೃತಪಟ್ಟ ಕ್ಯಾಪ್ಟನ್​ ಅರ್ಜುನನಿಗೆ ತ್ರಿಡಿ ಪೇಂಟಿಂಗ್ ಮೂಲಕ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.​

3d painting of arjuna elephant by mysore artist
ಮೃತಪಟ್ಟ ಅರ್ಜುನ ಆನೆಗೆ ತ್ರಿಡಿ ಪೇಂಟಿಂಗ್​ ಮೂಲಕ ನಮನ ಸಲ್ಲಿಸಿದ ಮೈಸೂರಿನ ಕಲಾವಿದ

By ETV Bharat Karnataka Team

Published : Dec 15, 2023, 4:12 PM IST

ಅರ್ಜುನ ಆನೆಗೆ ತ್ರಿಡಿ ಪೇಂಟಿಂಗ್​ ಮೂಲಕ ನಮನ

ಮೈಸೂರು:ಜಗತ್ಪ್ರಸಿದ್ಧ ದಸರಾ ಜಂಬೂಸವಾರಿಯಲ್ಲಿ8 ಬಾರಿ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ ಕಾಡಾನೆ ದಾಳಿಯಿಂದ ಮೃತಪಟ್ಟು ಇಂದಿಗೆ 11 ದಿನ. ಈ ಹಿನ್ನೆಲೆಯಲ್ಲಿ ನಗರದ ಅರಮನೆ ಮುಂಭಾಗದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮೈಸೂರಿನ ಕಲಾವಿದ ಅನಿಲ್, ತ್ರಿಡಿ ಪೇಂಟಿಂಗ್​ ಮೂಲಕ ಅರ್ಜುನನಿಗೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.

2012ರಿಂದ 2019ರವರೆಗೆ ಅಂಬಾರಿ ಹೊತ್ತು ದಸರಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೈರ್ಯಶಾಲಿ ಅರ್ಜುನ ಆನೆಯು ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಬಾರಿ ಭಾಗವಹಿಸಿದ ಕೀರ್ತಿ ಹೊಂದಿದೆ. ಆದರೆ, ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಎಸಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿತು. ಅರ್ಜುನನ ನೆನಪಿಗಾಗಿ ಅನಿಲ್​ ಅವರು ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ವಿಶಿಷ್ಟ ತ್ರಿಡಿ ಪೇಂಟಿಂಗ್​ ಬಿಡಿಸಿದ್ದಾರೆ.

ತ್ರಿಡಿ ಪೇಂಟಿಂಗ್​ ವಿಶೇಷತೆ: ಇದನ್ನು ಬರಿಗಣ್ಣಿನಿಂದ ನೋಡಿದರೆ ಆನೆ ಸರಿಯಾಗಿ ಕಾಣುವುದಿಲ್ಲ. ಮೊಬೈಲ್​ ಅಥವಾ ಇತರೆ ಕ್ಯಾಮರಾಗಳಿಂದ ನೋಡಿದರೆ ಸಂಪೂರ್ಣವಾಗಿ ತ್ರಿಡಿ ಎಫೆಕ್ಟ್​ನಲ್ಲಿ ಕಾಣುತ್ತದೆ. ಅರ್ಜುನನ ಮುಂದೆ ನಿಂತು ನೋಡಿದರೆ ಯಾವ ರೀತಿ ಭಾಸವಾಗುತ್ತದೆಯೋ, ಅದೇ ರೀತಿ ಪೇಂಟಿಂಗ್​ನಲ್ಲೂ ಕಾಣಿಸುತ್ತದೆ.

"8 ಬಾರಿ ಅಂಬಾರಿ ಹೊತ್ತ ಅರ್ಜುನನೊಂದಿಗೆ ಮೈಸೂರಿನ ಜನರಿಗೆ ಭಾವನಾತ್ಮಕ ಸಂಬಂಧವಿತ್ತು. ಆತ ಸಾವನ್ನಪ್ಪಿ ಇಂದಿಗೆ 11 ದಿನಗಳಾಗಿವೆ. ಸ್ಮರಣೆಗೋಸ್ಕರ ತ್ರಿಡಿ ಪೇಂಟಿಂಗ್​ನಲ್ಲಿ ಚಿತ್ರ ಬಿಡಿಸಿದ್ದೇನೆ. ಅರ್ಜುನನ ಸಾವು ತುಂಬಾ ನೋವುಂಟು ಮಾಡಿದೆ. ಆತನ ನೆನಪು ನಮ್ಮೊಂದಿಗೆ ಇರಲಿ ಎಂಬ ಉದ್ದೇಶದಿಂದ ಪೇಂಟಿಂಗ್​ ರಚಿಸಿದ್ದೇನೆ" ಎಂದು ಕಲಾವಿದ ಅನಿಲ್​ ಹೇಳಿದರು.

"ತ್ರಿಡಿ ಪೇಂಟಿಂಗ್​ ಅನ್ನು ಎನಾಮಲ್​ ಮತ್ತು ಅಕಾಲಿಕ್​ ಪೇಂಟ್​ ಬಳಸಿ ಮಾಡಲಾಗಿದ್ದು, ಅರ್ಜುನನ ಚಿತ್ರ ಬಿಡಿಸಲು 24 ಗಂಟೆ ಬೇಕಾಯಿತು. 18 ಅಡಿ ಉದ್ದ ಮತ್ತು 9 ಅಡಿ ಅಗಲ ಇರುವ ಆನೆಯ ಪೇಂಟಿಂಗ್​ ರಿಯಲಿಸ್ಟಿಕ್​ ಆಗಿ ಮೂಡಿಬಂದಿದೆ. ಚಿತ್ರದ ಜೊತೆ ನೀವು ಫೋಟೋ ತೆಗೆದುಕೊಂಡರೆ, ನಿಜವಾಗಿಯೂ ಅರ್ಜುನನ ಬಳಿ ನಿಂತು ಫೋಟೋ ತೆಗೆದಂತೆ ಅನುಭವವಾಗುತ್ತದೆ" ಎಂದು ಅವರು ವಿವರಿಸಿದರು.

ಅರ್ಜುನನ ಕುರಿತು: ಅರ್ಜುನ ಆನೆಯನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಸುಮಾರು 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ 64 ವರ್ಷದ ಆನೆ ಭಾಗವಹಿಸಿತ್ತು. ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ನೆಲೆಸಿತ್ತು. ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನನ ಪಾತ್ರ ಮಹತ್ವದ್ದಾಗಿತ್ತು.

ಇದನ್ನೂ ಓದಿ:ಮೈಸೂರು, ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಸಚಿವ ಈಶ್ವರ ಖಂಡ್ರೆ

ABOUT THE AUTHOR

...view details