ಕರ್ನಾಟಕ

karnataka

ETV Bharat / state

ಒಲಿದ ಜೀವ ಜೊತೆಯಲಿರಲು..: ಲೋಕ ಅದಾಲತ್‍ನಲ್ಲಿ ಮನಸ್ತಾಪ ಮರೆತು ಮತ್ತೆ ಒಂದಾದ 33 ಜೋಡಿ - Mysore District Court

ಮೈಸೂರು ಜಿಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಹಲವು ವರ್ಷದಿಂದ ವಿಚ್ಚೇದನಕ್ಕಾಗಿ ಅಲೆಯುತ್ತಿದ್ದ 33 ದಂಪತಿಯನ್ನು ಲೋಕ ಅದಾಲತ್​ನಲ್ಲಿ ಮತ್ತೆ ಒಂದಾದರು.

lok adalat
ಲೋಕ ಅದಾಲತ್‍

By

Published : Jul 9, 2023, 9:50 AM IST

ಲೋಕ ಅದಾಲತ್‍ನಲ್ಲಿ ಒಂದಾದ ಜೋಡಿಗಳು

ಮೈಸೂರು : ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಜಗಳ, ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಸಂಸಾರದಿಂದ ದೂರಾಗಲು ಮುಂದಾಗಿದ್ದ 33 ಜೋಡಿಗಳು ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಜಿಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ರಾಜಿ, ಸಂಧಾನದ ಮೂಲಕ ಇತ್ಯರ್ಥಪಡಿಸಲು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ ಮತ್ತೆ ಜತೆಯಾಗಿ ಹೆಜ್ಜೆ ಹಾಕುವ ಮನಸ್ಸು ಮಾಡಿದರು. ವರ್ಷಾನುಗಟ್ಟಲೆ ಒಬ್ಬರ ಮುಖ ಮತ್ತೊಬ್ಬರು ನೋಡದವರು ಅದಾಲತ್‍ನಲ್ಲಿ ಮುಖಾಮುಖಿಯಾಗಿ ಜೀವನದ ದೋಣಿಯಲ್ಲಿ ಒಟ್ಟಿಗೆ ಸಾಗುವ ಶಪಥ ಕೈಗೊಂಡರು. ಲೋಕ ಅದಾಲತ್‌ನಲ್ಲಿ ಗಮನ ಸೆಳೆದ 2 ಪ್ರಕರಣಗಳು ಹೀಗಿವೆ..

ಪ್ರಕರಣ 1 : ವಿಚ್ಛೇದನಕ್ಕೆ ಮುಂದಾಗಿದ್ದ ಒಂದೊಂದು ಜೋಡಿಯದ್ದೂ ಒಂದೊಂದು ಕಥೆ. ಒಂದು ಜೋಡಿ ಮದುವೆಯಾಗಿ ಮೂರೂವರೆ ವರ್ಷವಾಗಿದೆ. ಗಂಡ ಮಗುವಿಗೆ ಏಕೆ ಸ್ನಾನ ಮಾಡಿಸಿಲ್ಲ ಎಂದು ಕೇಳಿದ್ದೇ ತಪ್ಪಾಯ್ತು. ಇಷ್ಟಕ್ಕೇ ಹೆಂಡತಿ ಮುನಿಸಿಕೊಂಡು ವಿಚ್ಛೇದನದ ನೋಟಿಸ್ ಕಳುಹಿಸಿದ್ದರು. 6 ತಿಂಗಳು ದೂರವಾಗಿದ್ದ ದಂಪತಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಮತ್ತೆ ಒಂದಾಗಿದ್ದಾರೆ.

ಪ್ರಕರಣ 2: ಮತ್ತೊಂದು ಪ್ರಕರಣದಲ್ಲಿ ಇಬ್ಬರೂ ಇಂಜಿನಿಯರ್​ಗಳು. ಒಬ್ಬರು ಮೈಸೂರಿನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ. ಕೆಲಸದ ಕಾರಣಕ್ಕಾಗಿಯೇ ದೂರಾಗಲು ಮುಂದಾಗಿದ್ದರು. ಇದೀಗ ಮುನಿಸು ಮರೆತು ಮತ್ತೆ ಜೊತೆಯಾಗಿದ್ದಾರೆ.

ಬಾಳಿಗೊಂದು ಕಿವಿಮಾತು : ಅದಾಲತ್‍ನಲ್ಲಿ ಜೋಡಿಗಳನ್ನು ಒಂದು ಮಾಡಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ, "ಈ ಬಾರಿಯ ಲೋಕ ಅದಾಲತ್‍ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ಮೊದಲ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದ ಹೆಚ್ಚು ಚಟುವಟಿಕೆಯಿಂದ ತೊಡಗಿಸಿಕೊಳ್ಳಲಾಗಿತ್ತು. ಅದಾಲತ್‍ನಲ್ಲಿ 87 ಕೌಟುಂಬಿಕ ಪ್ರಕರಣಗಳು ಬಗೆಹರಿದಿದ್ದು, 33 ಜೋಡಿ ವಿಚ್ಛೇದನದ ನಿರ್ಧಾರ ಬದಲಿಸಿ ಒಂದಾಗಿದ್ದಾರೆ. ಜಿಲ್ಲೆಯಾದ್ಯಂತ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಪ್ರಿ ಲಿಟಿಗೇಷನ್ ಪ್ರಕರಣಗಳನ್ನೂ ಹೆಚ್ಚು ಬಗೆಹರಿಸಲಾಗುವುದು" ಎಂದರು.

"ಸಣ್ಣ ಪುಟ್ಟ ಕಾರಣಕ್ಕೆ ಗಂಡ, ಹೆಂಡತಿ ದೂರಾಗಿ ಸಂಸಾರ ಒಡೆದು ಚೂರಾಗಿತ್ತು. ಶನಿವಾರ ಅವರನ್ನು ಒಟ್ಟುಗೂಡಿಸಿದ್ದೇವೆ. ಒಂದು ಕುಟುಂಬ ಉಳಿಸಿದ್ದೇವೆ. ಒಳ್ಳೆಯ ಕಾರ್ಯವನ್ನು ನ್ಯಾಯಾಧೀಶರು, ವಕೀಲರು ಮಾಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಗಂಡ ಹೆಂಡತಿ ತಿಳುವಳಿಕೆಯಿಂದ, ಜವಾಬ್ದಾರಿ ಅರಿತು ಸಮಾಜಮುಖಿಯಾಗಿ ಸಂಸಾರ ನಡೆಸಬೇಕು. ಜಗಳ, ಕೋಪ, ಮನಸ್ತಾಪಕ್ಕೆ ಜಾಗ ನೀಡದೇ ಹೊಂದಾಣಿಕೆಯಿಂದ ನಡೆದರೆ ಸಂತಸದಿಂದ ಜೀವನ ನಡೆಸಬಹುದು" ಎಂದು ಅವರು ಸಲಹೆ ನೀಡಿದರು.

ಇದನ್ನೂ ಓದಿ :ಮುರಿದ ಮನಸುಗಳು ಮತ್ತೆ ಒಂದಾದವು.. : ಲೋಕ ಅದಾಲತ್‌ನಲ್ಲಿ 29 ಜೋಡಿಗಳಿಗೆ ಹೊಸ ಬದುಕು

ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ವೇಲಾ ಡಿ ಖೊಡೆ, ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ, ಗಿರೀಶ್ ಭಟ್, ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ :ಫೆ.11 ರಂದು ರಾಷ್ಟೀಯ ಲೋಕ ಅದಾಲತ್ : 1,11,492 ಪ್ರಕರಣಗಳು ವಿಚಾರಣೆಗೆ ಬಾಕಿ

ABOUT THE AUTHOR

...view details