ಕರ್ನಾಟಕ

karnataka

ETV Bharat / state

ಅಪರಾಧ ಮತ್ತು ರಸ್ತೆ ಅಪಘಾತ ಹೆಚ್ಚಳ: ಮೈಸೂರು ನಗರಕ್ಕೆ 250 ಹೊಸ ಸಿಸಿಟಿವಿ ಕ್ಯಾಮೆರಾ

ಮೈಸೂರು ನಗರದಲ್ಲಿ ಅಪರಾಧ ಮತ್ತು ರಸ್ತೆ ಅಪಘಾತ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರ ಪೊಲೀಸರು ಹೈಟೆಕ್​ ತಂತ್ರಜ್ಞಾನದ 250 ಕ್ಯಾಮರಾಗಳನ್ನ ಅಳವಡಿಸಲು ಯೋಜನೆ ರೂಪಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್

By ETV Bharat Karnataka Team

Published : Jan 9, 2024, 3:26 PM IST

Updated : Jan 9, 2024, 7:35 PM IST

ಮೈಸೂರು :ಮೈಸೂರು ನಗರದಲ್ಲಿ ಇತ್ತೀಚೆಗೆ ಅಪರಾಧ ಮತ್ತು ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಜನನಿಬಿಡ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಮೈಸೂರು ನಗರ ಪೊಲೀಸರು ಹೈಟೆಕ್ ತಂತ್ರಜ್ಞಾನದ 250 ನೂತನ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸಲು ಯೋಜನೆ ರೂಪಿಸಿದ್ದಾರೆ.

ಮೈಸೂರು ನಗರ ಈಗ ಅಭಿವೃದ್ಧಿ ಹೊಂದುತ್ತಿರುವ ಸಿಟಿಗಳ ಪೈಕಿ ಒಂದಾಗಿದ್ದು, ಇಲ್ಲಿ ನಗರದ ಅಭಿವೃದ್ಧಿ ಜೊತೆಗೆ ನಗರದ ವ್ಯಾಪ್ತಿ ಸಹ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಅಪರಾಧ ಪ್ರಕರಣಗಳು ಮತ್ತು ರಸ್ತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೈಸೂರು ನಗರದ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೈಟೆಕ್ ಮಾದರಿಯ 250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಮೈಸೂರು ನಗರ ಪೊಲೀಸರು ಯೋಜನೆ ರೂಪಿಸಿದ್ದು, ಅದು ಪ್ರಗತಿಯಲ್ಲಿದೆ.

ನೂತನ ಹೈಟೆಕ್ ಕ್ಯಾಮರಾಗಳ ಅಳವಡಿಕೆಯ ಕಾರಣವೇನು ಮತ್ತು ಇದರ ಉಪಯೋಗವೇನು ?:ಬೆಂಗಳೂರು ನಗರ ಬಿಟ್ಟರೆ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಸಹ ಒಂದಾಗಿದೆ. ನಗರ ಬೆಳೆದಂತೆ ಜನಸಂಖ್ಯೆ ಸಹ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆಯಲ್ಲೂ ಭಾರಿ ಪ್ರಮಾಣದ ಏರಿಕೆ ಆಗಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಮೈಸೂರು ನಗರ ಈಗ ಬೆಳೆದಿರುವುದರಿಂದ ಯಾವುದಾದರೂ ಅಪರಾಧ ಪ್ರಕರಣಗಳು ಸಂಭವಿಸಿದರೆ ಅದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದ್ದು, ಜೊತೆಗೆ ರಸ್ತೆಗಳಲ್ಲಿ ಅಪಘಾತಗಳು ಸಹ ಹೆಚ್ಚಾಗುತ್ತಿರುವುದರಿಂದ ಅದರ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ಮತ್ತು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಹೆಚ್ಚು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಜೊತೆಗೆ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ನೂತನ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಸಹಕಾರಿಯಾಗಲಿವೆ. ಇದರಿಂದ ಪರಿಣಾಮಕಾರಿಯಾಗಿ ಅಪರಾಧಗಳನ್ನು ಮತ್ತು ಸಂಚಾರಿ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಆಯುಕ್ತರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ , ಅನುದಾನ ಬಿಡುಗಡೆ ಮಾಡಿದ ಸರ್ಕಾರ : ಈಗಾಗಲೇ ನಗರದಲ್ಲಿ 108 ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ನಗರದ ಹೊರ ವಲಯದಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ 4.3 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ 250 ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಗರದ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಆಯುಕ್ತರ ಮನವಿ ಪುರಸ್ಕರಿಸಿ ರಾಜ್ಯ ಸರ್ಕಾರ 4.3 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಕೆ ಈಗ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.

ಪ್ರಮುಖ ಹೆದ್ದಾರಿಗಳಲ್ಲಿ ವಿಶೇಷ ಕ್ಯಾಮರಾಗಳ ಅಳವಡಿಕೆ : ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳಿಗೂ ಸಹ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಮೈಸೂರು - ಬೆಂಗಳೂರು ರಸ್ತೆ, ಹುಣಸೂರು ರಸ್ತೆ, ಮಹದೇವಪುರ ರಸ್ತೆ, ನರಸೀಪುರ ರಸ್ತೆ, ಬನ್ನೂರು ರಸ್ತೆ, ನಂಜನಗೂಡು ರಸ್ತೆ, ಮಾನಂದವಾಡಿ ರಸ್ತೆಗಳು ನಗರಕ್ಕೆ ಸಂಪರ್ಕಿಸಲಿದ್ದು, ಈ ರಸ್ತೆಗಳಲ್ಲಿ ಪೊಲೀಸರ ತಪಾಸಣೆ ಕಾರ್ಯ ಅಸಾಧ್ಯವಾದ್ದರಿಂದ, ಈ ರಸ್ತೆಗಳಿಗೆ ವಿಶೇಷ ಸರ್ವೇಲೆನ್ಸ್ ಕ್ಯಾಮರಾಗಳನ್ನು ಸುಮಾರು 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಈ ಕ್ಯಾಮರಾಗಳಿಂದ ಹೆದ್ದಾರಿಯಲ್ಲಿ ಅತಿವೇಗವಾಗಿ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ನಾನಾ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಸಹಕಾರಿಯಾಗುತ್ತವೆ.

ನಗರ ಪೊಲೀಸ್ ಆಯುಕ್ತರು ಹೇಳುವುದೇನು? : ಮೈಸೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪತ್ತೆಯೊಂದಿಗೆ ಅಪರಾಧ ಪತ್ತೆಗೆ 250 ನೂತನ ಹೈಟೆಕ್ ಮಾದರಿಯ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ನಾವು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ರಾಜ್ಯ ಸರ್ಕಾರ ಈ ಬಗ್ಗೆ ಉತ್ತಮ ಸ್ಪಂದನೆ ನೀಡಿ ಅನುದಾನ ಸಹ ಬಿಡುಗಡೆ ಮಾಡಿದ್ದು, ಈಗ ನಗರದ ಪ್ರಮುಖ ರಸ್ತೆಗಳಲ್ಲಿ, ಜನನಿಬೀಡ ಪ್ರದೇಶಗಳಲ್ಲಿ ಈ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದರೊಂದಿಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳಲ್ಲಿಯೂ ವಿಶೇಷವಾದ ಹೈಟೆಕ್ ಕ್ಯಾಮರಾಗಳನ್ನ ನಗರದ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಅಪರಾಧ ಎಸಗುವವರಿಗೆ ನಡುಕ; ಕಣ್ಗಾವಲಿಗಿವೆ 2.30 ಲಕ್ಷ ಸಿಸಿಟಿವಿ ಕ್ಯಾಮೆರಾ

Last Updated : Jan 9, 2024, 7:35 PM IST

ABOUT THE AUTHOR

...view details