ಮೈಸೂರು : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ ಬಿಡುಗಡೆ ಮಾಡಲಾಯಿತು. ಕಾರಾಗೃಹ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ದಿನೇಶ್ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೈದಿಗಳಿಗೆ ದಿನೇಶ್ ಅವರು, ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.
ಬಿಡುಗಡೆಯಾದ ಕೈದಿಗಳು : ರಾಜಸ್ಥಾನದ ಸಾವಲ್ ಸಿಂಗ್, ಪುತ್ತೂರಿನ ರಮೇಶ, ಉಡುಪಿಯ ಸುರೇಶ ಹರಿಜನ, ಹಾಸನದ ಪ್ರಶಾಂತ, ಮೈಸೂರಿನ ನಾಗರಾಜು, ಎಚ್.ಕೆ. ಪುಟ್ಟ, ಚಾಮರಾಜನಗರದ ರಾಮದಾಸ ನಾಯ್ಕ, ಕುಳ್ಳೇಗೌಡ, ಸುಂದ್ರಪ್ಪ, ತಿಮ್ಮ, ನಂಜನಗೂಡಿನ ಎಸ್.ಎಂ.ಸತೀಶ್ ಗೌಡ, ಶ್ರೀನಿವಾಸ, ಎಸ್.ನಟರಾಜ, ಜನಾರ್ಧನ, ನಿಂಗಪ್ಪ, ಮದ್ದೂರಿನ ಮಂಜುನಾಥ, ಸೋಮವಾರ ಪೇಟೆಯ ತಮ್ಮಯ್ಯ, ಗುರುಮೂರ್ತಿ, ಬಾಗಲಕೋಟೆಯ ರಿಯಾಜ್, ಮಳವಳ್ಳಿಯ ಸಿದ್ದೇಗೌಡ, ಹಾಸನದ ಎಂ.ಆರ್. ಸೋಮಶೇಖರ, ರಾಮೇಗೌಡ, ಮಂಡ್ಯದ ಎ.ಬಿ.ವಾಸು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮ್ಮ ಬಿಡುಗಡೆಯಾದವರು.
ಈ ವೇಳೆ ಮಾತನಾಡಿದ ನ್ಯಾಯಾಧೀಶರಾದ ದಿನೇಶ್ ಅವರು, ಕೈದಿಗಳು ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಬಂಧು-ಬಳಗದೊಂದಿಗೆ ಉತ್ತಮ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.
ಕಾರಾಗೃಹದ ಮುಖ್ಯ ಅಧೀಕ್ಷಕಿ ಪ್ರತಿಕ್ರಿಯೆ :ಇದೇ ಸಂದರ್ಭದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ಕಳೆದ ಜೂನ್‌ನಲ್ಲಿ 31 ಮಂದಿಯ ಕಡತ ಸಲ್ಲಿಸಲಾಗಿದ್ದು, ಅದರಲ್ಲಿ ನಾಲ್ಕು ಮಂದಿಯ ಬಿಡುಗಡೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಬ್ಬರ ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಲಾಗಿದ್ದು, ಒಬ್ಬರ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.