ಮೈಸೂರು: ಹಾಲು ಗಲ್ಲದ ಹದಿನೆಂಟು ತಿಂಗಳ ಪುಟಾಣಿಯೊಂದು ಮಾತನಾಡಲು ತೊದಲುವ ವಯಸ್ಸಲ್ಲೇ ಮುದ್ದುಮುದ್ದಾಗಿ ತಿಂಗಳು, ವರ್ಣಮಾಲೆ, ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಗುರುತಿಸುತ್ತಾಳೆ. ಈ ಮಗುವಿನ ಹೆಸರು ದಿಯಾ. ಅಂಬೆಗಾಲಿಡುವ ಸಂದರ್ಭದಲ್ಲಿ ಅಸಾಮಾನ್ಯ ಬುದ್ಧಿವಂತಿಕೆ ಹೊಂದಿದ್ದಾಳೆ. ಈ ಕಾರಣಕ್ಕೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನ ಸೂಪರ್ ಟ್ಯಾಲೆಂಟಡ್ ಕಿಡ್ ಪಟ್ಟಿಯಲ್ಲಿ ಈಕೆಯ ಹೆಸರು ಸೇರಿಕೊಂಡಿದೆ. ಪ್ರಮಾಣ ಪತ್ರ ಹಾಗೂ ಪದಕ ಮಗುವಿಗೆ ಲಭಿಸಿದೆ.
ಮೈಸೂರಿನ ವಿಜಯನಗರದ ನಾಲ್ಕನೇ ಹಂತದ ನಿವಾಸಿಗಳಾದ ಉಲ್ಲಾಸ್ ಹಾಗೂ ವಿದ್ಯಾಶ್ರೀ ದಂಪತಿಯ ಮಗಳು ದಿಯಾ. ವಾರಗಳ ಹೆಸರು, ತಿಂಗಳುಗಳು, ಕನ್ನಡ ವರ್ಣಮಾಲೆ, ವಿವಿಧ ಹಣ್ಣುಗಳು, ಪ್ರಾಣಿಗಳು, ತರಕಾರಿಗಳು, ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಕಂಡುಹಿಡಿಯುವುದು ಸೇರಿದಂತೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡುವ ವಿಡಿಯೋವನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಗೆ ಪೋಷಕರು ಕಳುಹಿಸಿದ್ದರು. ಈ ವಿಡಿಯೋ ಪರಿಶೀಲಿಸಿದ ಅಧಿಕಾರಿಗಳು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸೂಪರ್ ಟ್ಯಾಲೆಂಟ್ ಕಿಡ್ ದಿಯಾ ಹೆಸರು ಪ್ರಕಟಿಸಿ, ಪೋಸ್ಟ್ ಮೂಲಕ ಪ್ರಮಾಣ ಪತ್ರ ಹಾಗೂ ಪದಕವನ್ನು ಕಳುಹಿಸಿಕೊಟ್ಟಿದ್ದಾರೆ.
ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳನ್ನು ಫೋಟೊಗಳನ್ನು ನೋಡಿ ಕಂಡುಹಿಡಿಯಬಲ್ಲಳು. ದ್ರಾಕ್ಷಿ, ಸೇಬು, ಸೌತೆಕಾಯಿ, ಪಪಾಯಿ, ಬಾಳೆಹಣ್ಣು ಮತ್ತು ತರಕಾರಿಗಳಾದ ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಹಲವು ವಸ್ತುಗಳನ್ನು ಗುರುತಿಸುತ್ತಾಳೆ. ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಹಸು ಮತ್ತು ಇದರ ಜೊತೆಗೆ ಇಲಿ, ಒಂಟೆ ಸೇರಿದಂತೆ ಹಲವು ಪ್ರಾಣಿಗಳನ್ನು ಕಂಡುಹಿಡಿಯುತ್ತಾಳೆ.