ಮೈಸೂರು: "ಕೇಂದ್ರ ಸರ್ಕಾರವು ಮೈಸೂರು ವಿಭಾಗದ 15 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 347 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಿಂದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಆಗಸ್ಟ್ 6ರಂದು ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ" ಎಂದು ಮೈಸೂರು ರೈಲ್ವೆ ವಿಭಾಗದ ಡಿಆರ್ಎಂ ಶಿಲ್ಪಿ ಅಗರ್ವಾಲ್ ತಿಳಿಸಿದರು.
ಇಂದು ನಗರದ ರೈಲ್ವೆ ವಿಭಾಗೀಯ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, "ಭಾರತೀಯ ರೈಲ್ವೆ ದೇಶಾದ್ಯಂತ ರೈಲು ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಅಮೃತ್ ಭಾರತ್ ಸ್ಟೇಷನ್ ಯೋಜನೆ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ರೈಲು ಮೂಲಸೌಕರ್ಯ ನವೀಕರಿಸಿ ಮೇಲ್ದರ್ಜೆಗೇರಿಸಲು ಇಲಾಖೆ ಬದ್ಧವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದಾಖಲೆಯ 7,561 ಕೋಟಿ ರೂಪಾಯಿ ಲಭಿಸಿದೆ" ಎಂದು ಮಾಹಿತಿ ನೀಡಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆಲವು ಪ್ರಮುಖ 15 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳು ಹೀಗಿವೆ. ಚಾಮರಾಜನಗರ-CMNR, ಸಕಲೇಶಪುರ-SKLR, ಸುಬ್ರಹ್ಮಣ್ಯ ರೋಡ್-SBHR, ಬಂಟ್ವಾಳ BNTL, ಹಾಸನ-HAS, ತಿಪಟೂರು-TTR, ಅರಸಿಕೆರೆ ಜಂಕ್ಷನ್-ASK, ಚಿಕ್ಕಮಗಳೂರು-CMGR, ತಾಳಗುಪ್ಪ-TLGP, ಸಾಗರ ಜಂಬಗಾರು-SRI, ಶಿವಮೊಗ್ಗ ಟೌನ್-SMET, ಚಿತ್ರದುರ್ಗ-CTA, ದಾವಣಗೆರೆ-DVG, ಹರಿಹರ-HRR, ರಾಣೆಬೆನ್ನೂರು-RNA.
"ಸುಮಾರು 347 ಕೋಟಿ ರೂಪಾಯಿ ಅನುದಾನದ ಯೋಜನೆಯಲ್ಲಿ ಪ್ರಮುಖವಾಗಿ ಸುಸ್ಥಿರತೆ, ನಿಲ್ದಾಣಕ್ಕೆ ಒತ್ತಡ ಮುಕ್ತ ಪ್ರವೇಶ ಮತ್ತು ನಿರ್ಗಮನ, ಆಧುನಿಕ ಪ್ರಯಾಣಿಕ ಸೌಕರ್ಯಗಳು, ಉಚಿತ ವೈ-ಫೈ ಸೌಲಭ್ಯ, ದಿವ್ಯಾಂಗ ವ್ಯಕ್ತಿಗಳಿಗೆ ವಿಶೇಷ ಒತ್ತು ನೀಡುವುದು. ನಿಲ್ದಾಣದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡಲಾಗಿದೆ. ಯೋಜನೆಯ ಪ್ರಮುಖ ಅಂಶಗಳೆಂದರೆ ನಿಲ್ದಾಣದ ಸೌಕರ್ಯಗಳಾದ ಪ್ರವೇಶ ಭಾಗಗಳು, ಕಾಯುವ ಪ್ರದೇಶಗಳು, ಶೌಚಾಲಯಗಳು ಮತ್ತು ಅಗತ್ಯಗಳಿಗುಣವಾಗಿ ಲಿಫ್ಟ್ಗಳು ಮತ್ತು ಎಸ್ಕಲೇಟರ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗುವುದು" ಎಂದರು.
ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ:ABSS ಅಡಿಯಲ್ಲಿ, ಅಸ್ತಿತ್ವದಲ್ಲಿರುವ ರೈಲು ನಿಲ್ದಾಣಗಳನ್ನು ಅವುಗಳ ಒಟ್ಟಾರೆ ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು ಪುನರಾಭಿವೃದ್ಧಿಗೊಳಿಸಲಾಗುತ್ತದೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕ್ಕೆ ಪ್ಲಾಟ್‌ಫಾರ್ಮ್‌ಗಳು, ಕಾಯುವ ಪ್ರದೇಶಗಳು, ಟಿಕೆಟ್ ಕೌಂಟರ್ಗಳು, ಶೌಚಾಲಯಗಳು ಮತ್ತು ಇತರ ಸೌಕರ್ಯಗಳ ನವೀಕರಣ.