ಮೈಸೂರು:ಕೋವಿಡ್ -19 ರೋಗಾಣು ನಿಯಂತ್ರಣ ಸಂಬಂಧ ಮೈಸೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ಆರಂಭಗೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗೂಡಿದ್ದವರ ವಿರುದ್ದ ಪ್ರಕರಣ ದಾಖಲಾಗಿದೆ.
ಕೋವಿಡ್-19 ರೋಗಾಣು ಹರಡುವಿಕೆ ನಿಯಂತ್ರಣ ಸಂಬಂಧ ಸರ್ಕಾರವು ಮಾರ್ಗಸೂಚಿಗಳನ್ನು ನೀಡಿದ್ದು, ಇದರ ಪ್ರಕಾರ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ಸಂಬಂಧ ಮೈಸೂರು ನಗರದಲ್ಲಿ ಕಲಂ 144 ಸಿಆರ್‌ಪಿಸಿ ರೀತಿಯ ನಿಷೇಧಾಜ್ಞೆ ಸಹ ಜಾರಿಗೊಳಿಸಲಾಗಿದೆ.
ಪೊಲೀಸರು ದಾಖಲಿಸಿದ ಪ್ರಕರಣಗಳ ಪ್ರತಿ ಆದರೆ, ಕೆಲವು ಸಾರ್ವಜನಿಕರು ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇರುವುದು ಕಂಡು ಬಂದಿರುತ್ತದೆ. ಆದ್ದರಿಂದ ನಿನ್ನೆ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮೈಸೂರು ನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ವಿರುದ್ಧ ಉದಯಗಿರಿ, ಲಷ್ಕರ್, ಮೇಟಗಳ್ಳಿ, ಕೃಷ್ಣರಾಜ, ಕುವೆಂಪುನಗರ ಸರಸ್ವತಿಪುರಂ, ಲಕ್ಷ್ಮೀಪುರಂ ಪೊಲೀಸ್ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 19 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೋವಿಡ್-19 ನಿಯಂತ್ರಣ ಸಂಬಂಧ ಮೈಸೂರು ನಗರ ಪೊಲೀಸರಿಂದ ಇದೇ ರೀತಿಯಾಗಿ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.