ಮೈಸೂರು: ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದ ನಗರದ ಸುಮಾರು 14 ಕ್ಲಿನಿಕ್ಗಳಿಗೆ ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ಬೀಗ ಜಡಿದಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು, ಅನುಮತಿ ಪಡೆಯದ ಕ್ಲಿನಿಕ್ಗಳು ಮತ್ತು ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ.
ಪ್ರಮಾಣಪತ್ರ ಪಡೆಯದ 14 ಕ್ಲಿನಿಕ್ಗಳಿಗೆ ಬೀಗ :ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಟಾಸ್ಕ್ ಫೋರ್ಸ್ನ ಅಧಿಕಾರಿಗಳು, ವೈದ್ಯಕೀಯ ಪ್ರಮಾಣ ಪತ್ರ ನವೀಕರಣ ಮಾಡಿಸಿಕೊಳ್ಳದ 14 ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದಾರೆ. ಶುಕ್ರವಾರದಿಂದ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಪ್ರಮಾಣ ಪತ್ರವಿಲ್ಲದ ಇತರ ನಾಲ್ಕು ಕ್ಲಿನಿಕ್ಗಳನ್ನು ಪತ್ತೆ ಮಾಡಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಬೀಗ ಹಾಕಲಾಗುವುದು ಎಂದು ಕುಟುಂಬ ಕಲ್ಯಾಣಧಿಕಾರಿ ಡಾ ಗೋಪಿನಾಥ್ ತಿಳಿಸಿದರು.
ಅಧಿಕಾರಿಗಳ ಕಾರ್ಯಾಚರಣೆ ವೇಳೆ ಕ್ಲಿನಿಕ್ ನಡೆಸುತ್ತಿರುವ ವೈದ್ಯರು ಬಿಎಎಂಎಸ್, ಬಿಎಡಿಎಸ್, ಬಿಯುಎಂಎಸ್ ಸರ್ಟಿಫಿಕೇಟ್ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಕೊಲ್ಕತ್ತಾ, ರಾಂಚಿ, ಹಾಗೂ ದೆಹಲಿಯ ವೈದ್ಯಕೀಯ ಸಂಸ್ಥೆಗಳಿಂದ ಪಡೆದಿರುವ ಪ್ರಮಾಣಪತ್ರ ತೋರಿಸುತ್ತಿದ್ದಾರೆ. ಆದರೆ, ಈ ಪ್ರಮಾಣ ಪತ್ರಗಳ ಬಗ್ಗೆ ವಿವರ ಲಭ್ಯವಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರ ಗಮನಕ್ಕೆ ತರಲಾಗಿದೆ. ಸದ್ಯ ಜಿಲ್ಲೆಯಲ್ಲಿ ಅನಧಿಕೃತ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಹೇಳಿದ್ದಾರೆ.