ಮೈಸೂರು: ಕೋವಿಡ್–19 ಬಿಕ್ಕಟ್ಟು ನಿಭಾಯಿಸಲು ಜಿಲ್ಲಾಡಳಿತಕ್ಕೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್ ಫಂಡ್) ನೀಡುವ ಮೂಲಕ ನೆರವಾದ ಕೈಗಾರಿಕಾ ಕಂಪನಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಧನ್ಯವಾದ ತಿಳಿಸಿದರು.
ಕೋವಿಡ್ ಪರಿಸ್ಥಿತಿ ಎದುರಿಸಲು ಕೈಗಾರಿಕೆಗಳಿಂದ ಮೈಸೂರು ಜಿಲ್ಲಾಡಳಿತಕ್ಕೆ 12.53 ಕೋಟಿ ರೂ. ನೆರವು - ಸಿಎಸ್‌ಆರ್ ಫಂಡ್ ನೀಡಿದ ಕೈಗಾರಿಕೆಗಳು
ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಉಪಯೋಗವಾಗುವಂತೆ ಮೈಸೂರು ಜಿಲ್ಲೆಯ ಸುಮಾರು 24 ವಿವಿಧ ಕೈಗಾರಿಕಾ ಕಂಪನಿಗಳು ಸಿಎಸ್‌ಆರ್ ಫಂಡ್ ಅಡಿಯಲ್ಲಿ 12.53 ಕೋಟಿ ರೂ. ಗಳನ್ನು ಜಿಲ್ಲಾಡಳಿತಕ್ಕೆ ನೀಡಿವೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇವಲ 20ದಿನಗಳ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿರುವ 24 ವಿವಿಧ ಕೈಗಾರಿಕಾ ಕಂಪನಿಗಳು ಸಿಎಸ್‌ಆರ್ ಫಂಡ್ ಅಡಿಯಲ್ಲಿ 12.53 ಕೋಟಿ ರೂ. ನೀಡಿವೆ. ಈ ಹಣವು ಕೋವಿಡ್ ನಿರ್ವಹಣೆಗೆ ಉಪಯೋಗವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 54 ಕೈಗಾರಿಕೆಗಳು ಸಿಎಸ್‌ಆರ್ ಫಂಡ್ ನೀಡಬಹುದಾಗಿದ್ದು, ಅದರಲ್ಲಿ 41 ಕೈಗಾರಿಕೆಗಳು ಫಂಡ್ ನೀಡಲು ಮುಂದೆ ಬಂದಿವೆ. ಇಲ್ಲಿಯವರೆಗೆ ವಿವಿಧ ಕಂಪನಿಗಳು ಐಸಿಯು ಹಾಸಿಗೆ, ಆಕ್ಸಿಜನ್ ಕಾನ್ಸನ್‌ಟ್ರೇಟರ್, ಆ್ಯಂಬುಲೆನ್ಸ್, ಮೆಡಿಕಲ್ ಕಿಟ್, ಆಕ್ಸಿಜನ್ ಪ್ಲಾಂಟ್, ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ನೀಡಿವೆ ಎಂದು ಮಾಹಿತಿ ನೀಡಿದರು.