ಮೈಸೂರು: ನಗರದ ಸೆನ್ (CEN) ಠಾಣೆ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ 30 ಲಕ್ಷ ರೂಪಾಯಿ ಮೌಲ್ಯದ 100 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಅವುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಬುಧವಾರ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಮ್ಮ ಕಚೇರಿಯ ಸಭಾಂಗಣದಲ್ಲಿ ವಶಕ್ಕೆ ಪಡೆದ ಮೊಬೈಲ್ ಫೋನ್ಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸಿದರು. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಸೆನ್ ಠಾಣೆ ಪಿಐ ಯೋಗನಂಜಪ್ಪ, ಪಿಎಸ್‌ಐ ಪೂಜಾ ಹತ್ತರಕಿ ಹಾಗೂ ಸಿಬ್ಬಂದಿ ಇದ್ದರು.
ವಿವಿಧ ಕಾರಣಗಳಿಂದ ನಗರ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಕೆಎಸ್‌ಪಿ ಅಪ್ಲಿಕೇಷನ್‌ನಲ್ಲಿ ದೂರು ದಾಖಲಿಸಿ, ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್‌ನಲ್ಲಿ (ಸಿಇಐಆರ್) ಮತ್ತು ಮೈಸೂರು ನಗರ ಪೊಲೀಸ್ ಘಟಕದಿಂದ ಪ್ರಾರಂಭಿಸಲಾಗಿರುವ 6363255135 ಮೊಬೈಲ್ ನಂಬರ್ಗೆ Hi (ಹಾಯ್) ಎಂದು ಮೆಸೇಜ್ ಕಳುಹಿಸುವ ಮೂಲಕ ಕೇಳುವ ಮಾಹಿತಿ ಭರ್ತಿ ಮಾಡಿ ದೂರು ದಾಖಲಿಸಿದ್ದರು. ಈ ದೂರುಗಳನ್ನು ಪರಿಶೀಲಿಸಿ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ಸೆನ್ ಪೊಲೀಸರು 30 ಲಕ್ಷ ರೂ. ಮೌಲ್ಯದ 100 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಅವುಗಳ ವಾರಸುದಾರರಿಗೆ ಮರಳಿಸಿದರು.