ಮೈಸೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ, 10 ಕುಖ್ಯಾತ ಸರಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ ತೂಕದ 25 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿಶೇಷ ತಂಡ ರಚನೆ: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿದೆ. ಈ ಬಗ್ಗೆ ಸಿಸಿಬಿ, ಎಸಿಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ, ಚಾಮರಾಜನಗರ ಮೂಲದ ಹಳೆಯ ಕಳ್ಳ ಮಂಜನನ್ನು ವಿಚಾರಣೆಗೆ ಒಳಪಡಿಸಿತ್ತು.
ಚಿನ್ನದ ಸರ, ಬಳೆಗಳು ವಶಕ್ಕೆ:ಆತ ನೀಡಿದ ಮಾಹಿತಿಯ ಮೇರೆಗೆ ಈ ತಂಡದ ಇತರ 9 ಜನ ಸದಸ್ಯರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿತ್ತು. ಇವರುಗಳು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ, ಸುಮಾರು 50 ಲಕ್ಷ ಮೌಲ್ಯದ ಚಿನ್ನದ ಸರ ಮತ್ತು ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ಬಳಸಿದ್ದ 7 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಸರಗಳ್ಳರಿಗೆ ವಕೀಲ ಸಾಥ್:ಕಳೆದ 2 ತಿಂಗಳ ಹಿಂದೆ ಮನೆಗಳ್ಳತನ ಕೇಸ್ನಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿದಾಗ, ಮನೆಗಳ್ಳರು ಹಾಗೂ ಸರಗಳ್ಳರಿಗೆ ವಕೀಲ ಉಮೇಶ ಎಂಬುವವರು ಕುಮ್ಮಕ್ಕು ನೀಡುತ್ತಿದ್ದರು ಎನ್ನಲಾಗ್ತಿದೆ. ಸರಗಳ್ಳತನ ಮಾಡಿದ ಚಿನ್ನದ ಸರಗಳನ್ನು ವಕೀಲ ಮಾರಾಟ ಮಾಡಿಸುತ್ತಿದ್ದ ಹಾಗೂ ಸಿಕ್ಕಿಬಿದ್ದ ಸರಗಳ್ಳರಿಗೆ ಜಾಮೀನು ಸಹ ಕೊಡಿಸುತ್ತಿದ್ದನು. ಈ ವಕೀಲನನ್ನೂ ಬಂಧಿಸಲಾಗಿದ್ದು, ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದ ಸರಗಳ್ಳರನ್ನು ಬಂಧಿಸಲಾಗಿದೆ.