ಕರ್ನಾಟಕ

karnataka

ETV Bharat / state

ಮೈಸೂರು ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಕಾಲ ಅವಕಾಶ: ಸಚಿವ ಎಸ್​ಟಿ ಸೋಮಶೇಖರ್

ಮೈಸೂರಿನಲ್ಲಿ ಇನ್ನೂ ಹತ್ತು ದಿನಗಳ ಕಾಲ ದೀಪಾಲಂಕಾರ ವೀಕ್ಷಣೆ ಮಾಡಲು ಅವಕಾಶ ನೀಡುವಂತೆ ಸಿಎಂ ಸೂಚಿಸಿದ್ದು, ಅದರನ್ವಯ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್ ಹೇಳಿದರು.

By

Published : Oct 6, 2022, 4:02 PM IST

10-more-days-allowed-to-mysore-dasara-lights-says-minister-st-somashekhar
ಮೈಸೂರು ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಕಾಲ ಅವಕಾಶ: ಸಚಿವ ಎಸ್​ಟಿ ಸೋಮಶೇಖರ್

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ನಿಮಿತ್ತ ಮಾಡಲಾದ ದೀಪಾಲಂಕಾರವನ್ನು ಇನ್ನೂ ಹತ್ತು ದಿನಗಳ ಕಾಲ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಮೈಸೂರು ನಗರದ ಸುತ್ತಮುತ್ತಲು ಸುಮಾರು 124 ಕಿ.ಮೀ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಪ್ರಮುಖ ವೃತ್ತಗಳಲ್ಲಿ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದೀಪಾಲಂಕರದಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಯಶಸ್ಸಿಗೆ ಕಾರಣೀಭೂತರಾದ ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ದಸರಾ ಉಪಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು, ಮೈಸೂರು ಜನತೆಗೆ ಅಭಿನಂದನೆಗಳು ಎಂದು ಹೇಳಿದರು.

ಜಂಬೂ ಸವಾರಿಗೆ ಆಗಮಿಸಿದ್ದ 15 ಲಕ್ಷ ಜನ: ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟನೆ ಮಾಡುವ ಮೂಲಕ ಈ ಬಾರಿಯ ದಸರಾಗೆ ಸಾಕಷ್ಟು ಮೆರಗು ತಂದಿತು. ಜಂಬೂಸವಾರಿ ಮೆರವಣಿಗೆಯಲ್ಲಿ 47 ಸ್ತಬ್ಧಚಿತ್ರಗಳು, 30 ಜಿಲ್ಲೆಗಳ 66 ಕಲಾತಂಡಗಳ ಕಲಾವಿದರು ಆಯಾ ಜಿಲ್ಲೆಗಳ ಸಾಂಸ್ಕೃತಿಕ ವೈಭವ ಸಾರಿದರು. ಜಂಬೂ ಸವಾರಿ ದಿನದಂದು ಸುಮಾರು 15 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು ಎಂದರು.

ಕೋವಿಡ್​ನಿಂದ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರಿಗೆ ಅದ್ದೂರಿ ದಸರಾ ವೀಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ರೈತ ದಸರಾ, ಕುಸ್ತಿ ಪಂದ್ಯ, ಯುವ ಸಂಭ್ರಮ, ಯುವ ದಸರಾ, ಕವಿಗೋಷ್ಠಿ, ಆಹಾರ ಮೇಳ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯುವ ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಶಂಸೆ ಕೂಡ ವ್ಯಕ್ತವಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ವಿವಿಧ ಬಗೆಯ ಪುಷ್ಪಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಡಲಾಗಿತ್ತು ಎಂದು ಹೇಳಿದರು.

ಶೀಘ್ರವೇ ಖರ್ಚು ವೆಚ್ಚದ ಲೆಕ್ಕ:ಕಳೆದ ವರ್ಷದಂತೆ ಈ ವರ್ಷ ಕೂಡ ದಸರಾ ಆಚರಣೆಯ ಖರ್ಚು ವೆಚ್ಚದ ಲೆಕ್ಕವನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು. ಕಳೆದ ವರ್ಷದಂತೆ ಈ ವರ್ಷ ಕೂಡ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಯ್ಕೆ ಸಮಿತಿ ಹತ್ತು ಸಾಧಕರನ್ನು ಆಯ್ಕೆ ಮಾಡಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವರ್ಷ ಪ್ರಥಮಬಾರಿಗೆ ಕೈಗಾರಿಕಾ, ವೈದ್ಯಕೀಯ ದಸರಾ ಆಯೋಜಿಸಲಾಗಿದ್ದು ಮತ್ತೊಂದು ವಿಶೇಷ ಎಂದು ಸಚಿವರು ತಿಳಿಸಿದರು.

ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರಾತ್ರಿ 11 ರಿಂದ ಬೆಳಗ್ಗೆ 3 ಗಂಟೆಯವರೆಗೆ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ದಸರಾ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಎಸ್ಪಿ ಚೇತನ್, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಎಡಿಸಿ ಮಂಜುನಾಥಸ್ವಾಮಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:ತಾಲೀಮು ನಡೆಸಿದ್ರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳದ ಹೊಸ ಆನೆಗಳು: ಬೇಸರ ವ್ಯಕ್ತಪಡಿಸಿದ ಮಾವುತರು

ABOUT THE AUTHOR

...view details