ಕರ್ನಾಟಕ

karnataka

ETV Bharat / state

ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ..: ಯುವಕರ ಪಾದಯಾತ್ರೆಗೆ ಡಾಲಿ ಧನಂಜಯ್ ಚಾಲನೆ - ಕೆ ಎಂ ದೊಡ್ಡಿಯ ವೆಂಕಟೇಶ್ವರ ದೇವಸ್ಥಾನ

ಆದಷ್ಟು ಬೇಗ ತಮಗೆ ವಧು ಸಿಗಲೆಂದು ಪ್ರಾರ್ಥಿಸಿ ಮಂಡ್ಯ ಜಿಲ್ಲೆಯಿಂದ ಅವಿವಾಹಿತರು ಪಾದಯಾತ್ರೆ ಮೂಲಕ ಮಾದಪ್ಪನ ದರ್ಶನಕ್ಕೆ ಹೊರಟಿದ್ದಾರೆ.

ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ
ಬ್ರಹ್ಮಚಾರಿಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

By

Published : Feb 23, 2023, 7:05 PM IST

Updated : Feb 23, 2023, 7:47 PM IST

ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಪಾದಯಾತ್ರೆಗೆ ಡಾಲಿ ಧನಂಜಯ್ ಚಾಲನೆ

ಮಂಡ್ಯ:ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಸಾಮಾನ್ಯ. ಅದೇ ರೀತಿ 30 ವರ್ಷ ದಾಟಿದ್ರೂ ಮದುವೆಯಾಗದ ಅವಿವಾಹಿತರು ವಧು ಸಿಗುವಂತೆ ಮಾಡಪ್ಪಾ ಅಂತಾ ಪಾದಯಾತ್ರೆ ಮೂಲಕ ಏಳು ಮಲೆಗಳೊಡೆಯ ಮುದ್ದು ಮಾದಪ್ಪನ ಮೊರೆ ಹೋಗಿದ್ದಾರೆ. ಹೆಣ್ಣು ಸಿಗದ ನೋವಿನಲ್ಲಿರುವ ಯುವಕರ ಕಾಲ್ನಡಿಗೆ ಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ ಚಾಲನೆ ನೀಡಿ ಶುಭ ಹಾರೈಸಿದರು.

ಒಂದು ಹೆಣ್ಣಿಗೆ ಒಂದು ಗಂಡು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಇಂದು ಎಷ್ಟೋ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದೆ ಪರದಾಡುತ್ತಿದ್ದಾರೆ. ವಯಸ್ಸು ದಾಟಿ ಬಿಳಿಗೂದಲು ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು ಸಹ ನಮ್ಮ ನಡುವೆ ಇದ್ದಾರೆ. ಇದೀಗ ತಮಗೆ ವಧು ಕರುಣಿಸಪ್ಪಾ ಅಂತ ಅವಿವಾಹಿತರ ಗುಂಪೊಂದು ದೇವರ ಮೊರೆ ಹೋಗಿದ್ದಾರೆ.

ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಎಂಬ ಶೀರ್ಷಿಕೆಯೊಂದಿಗೆ ಶೀಘ್ರ ವಧು ಸಿಗಲೆಂದು ಪ್ರಾರ್ಥಿಸಿ ಇಂದು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಗ್ರಾಮದಿಂದ ಅವಿವಾಹಿತರು ಪಾದಯಾತ್ರೆ ಮೂಲಕ ಮಾದಪ್ಪನ ದರ್ಶನಕ್ಕೆ ಹೊರಟರು. ಅದಕ್ಕೂ ಮುನ್ನ ಕೆ.ಎಂ.ದೊಡ್ಡಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಪಾದಯಾತ್ರಿಗಳು ನಟ ಡಾಲಿ ಜೊತೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು.

ಡಾಲಿ ಧನಂಜಯ್ ತುಸು ದೂರ ಕಾಲ್ನಡಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ಮದುವೆ ಆಗಿಲ್ಲ ಅಂತ ಪಾದಯಾತ್ರೆ ನಡೆಸುತ್ತಿರೋದನ್ನು ನಾನು ಕೇಳಿದ್ದು ಫಸ್ಟ್ ಟೈಮ್. ಮೊದಲು ತಮಾಷೆ ಅನ್ನಿಸ್ತು. ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದು ಪಾದಯಾತ್ರೆಗಳು ಹೇಳಿದಾಗ ಇದು ನಿಜಕ್ಕೂ ಗಂಭೀರ ವಿಚಾರವಾಗಿದೆ ಅನ್ನಿಸ್ತು ಎಂದರು. ಈ ರೀತಿ ಹೆಣ್ಣು ಸಿಗದಿರಲು ಹಿಂದೆ ಆಗ್ತಿದ್ದ ಭ್ರೂಣ ಹತ್ಯೆ ಕಾರಣ ಎಂದ ಧನಂಜಯ್, ಅದರ ಎಫೆಕ್ಟ್ ಈಗ ಗೊತ್ತಾಗ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಜೋಡಿಯಾಗಿ ಮಾದಪ್ಪನ ದರ್ಶನ ಪಡೆಯುವಂತಾಗಲಿ ಎಂದು ಹಾರೈಸಿದರು.

3 ದಿನ ಪಾದಯಾತ್ರೆ: ಇಂದಿನಿಂದ ಆರಂಭವಾಗಿರುವ ಪಾದಯಾತ್ರೆಯಲ್ಲಿ ರಾಜ್ಯದ ನಾನಾಕಡೆಯಲ್ಲದೇ ಆಂಧ್ರಪ್ರದೇಶ, ಕೇರಳ ರಾಜ್ಯದ ಅವಿವಾಹಿತರು ಭಾಗವಹಿಸಿರೋದು ವಿಶೇಷ. ಕೆ. ಎಂ. ದೊಡ್ಡಿಯಿಂದ ಆರಂಭವಾಗಿರುವ ಯಾತ್ರೆ ಮಳವಳ್ಳಿ, ಕೊಳ್ಳೇಗಾಲ ಹಾಗೂ ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟವನ್ನು ಬ್ರಹ್ಮಚಾರಿ ಯುವಕರು ತಲುಪಲಿದ್ದಾರೆ. ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು ಭಾಗವಹಿಸುವವರಿಗೆ ಊಟ, ರಾತ್ರಿ ತಂಗಲು ವ್ಯವಸ್ಥೆ, ದಾರಿಯುದ್ದಕ್ಕೂ ತಂಪು ಪಾನಿಯ, ಹಣ್ಣು ನೀಡಲು ಕ್ರಮ ವಹಿಸಲಾಗಿದೆ.

ಕೆ.ಎಂ.ದೊಡ್ಡಿಯಿಂದ ಹೊರಟ 30ಕ್ಕೂ ಹೆಚ್ಚು ಪಾದಯಾತ್ರಿಗಳಿಗೆ ಮಳವಳ್ಳಿ, ಕೊಳ್ಳೇಗಾಲದಲ್ಲಿ ಮತ್ತಷ್ಟು ಜನ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಯಾತ್ರೆಯಲ್ಲಿ ಭಾಗವಹಿಸುವವರಿಗೆ 3 ಷರತ್ತು ಹಾಕಲಾಗಿದೆ. ಮೊದಲನೆಯದು ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಎರಡನೆಯದು ವಿವಾಹಿತರಿಗೆ ಪಾದಯಾತ್ರೆಯಲ್ಲಿ ಅವಕಾಶ ಇಲ್ಲ. ಮೂರನೆಯದು ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಗೆ ಬರುವಂತಿಲ್ಲ. ಇನ್ನು ಪಾದಯಾತ್ರೆ ಹೊರಟ ಹಲವರು, ರೈತ ಎಂಬ ಕಾರಣಕ್ಕೆ ಹೆಣ್ಣು ಕೊಡಲು ಹಿಂಜರಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅರಣ್ಯ ಸಂರಕ್ಷಣೆಗೆ 24/7 ಕಾಳಜಿ; ಥರ್ಮಲ್‌ ಡ್ರೋಣ್‌, ಪರಿಣತ ಸಿಬ್ಬಂದಿಯಿಂದ ಕಣ್ಗಾವಲು

Last Updated : Feb 23, 2023, 7:47 PM IST

ABOUT THE AUTHOR

...view details