ಕರ್ನಾಟಕ

karnataka

ETV Bharat / state

ಮಳವಳ್ಳಿ ಯುವತಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರಿಂದ ಪ್ರತಿಭಟನೆ - ಮಂಡ್ಯದಲ್ಲಿ ಪ್ರತಿಭಟನೆ

ಮಂಡ್ಯ ಜಿಲ್ಲೆಯ ಮಳವಳ್ಳಿಯ ಯುವತಿ ಹತ್ಯೆ ಪ್ರಕರಣ ಸಂಬಂಧ ಇಲ್ಲಿಯವರೆಗೆ ಆರೋಪಿಯನ್ನು ಪತ್ತೆ ಹಚ್ಚದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಪೋಷಕರು ಹಾಗೂ ವಿವಿಧ ಸಂಘಟನೆಗಳು ಸೇರಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಮಳವಳ್ಳಿ ಯುವತಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರಿಂದ ಪ್ರತಿಭಟನೆ
ಮಳವಳ್ಳಿ ಯುವತಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರಿಂದ ಪ್ರತಿಭಟನೆ

By

Published : Mar 8, 2022, 2:41 PM IST

Updated : Mar 8, 2022, 2:56 PM IST

ಮಂಡ್ಯ: ಆಕೆ ಇನ್ನೂ 18ರ ಹರೆಯದ ಯುವತಿ. ವಿದ್ಯಾರ್ಜನೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಆಕೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಅಷ್ಟೇ ಅಲ್ಲ, ಪ್ರೀತಿಸಿದ ತಪ್ಪಿಗೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.

ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೇಮಾವತಿ ಎಂಬವರ ಪುತ್ರಿ ಯುಕ್ತಿ (18) ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಈ ನಡುವೆ ಅದೇ ಪಟ್ಟಣದ ಪೇಟೆ ಬೀದಿಯ ನಿವಾಸಿ ಹನುಮಂತೇಗೌಡರ ಪುತ್ರ ಶಶಿಕುಮಾರ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು.

ಆದರೆ ಜ.25 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋದ ಯುಕ್ತಿ ಜ.27 ರಂದು ಸುಟ್ಟ ಸ್ಥಿತಿಯಲ್ಲಿ ಕಿರಗಾವಲು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದಳು.

ಮಳವಳ್ಳಿ ಯುವತಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರಿಂದ ಪ್ರತಿಭಟನೆ

ಪ್ರತಿಭಟನೆ: ಜ.27 ರಂದು ಸಿಕ್ಕ ಯುವತಿಯ ಶವವನ್ನು ಅಪರಿಚಿತ ಶವ ಎಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದಾರೆ. ಆದರೆ ಪೋಷಕರು ತಮ್ಮ ಮಗಳನ್ನು ಕಿವಿ ಓಲೆ ಹಾಗೂ ಉಂಗುರದ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.

ಈ ಪ್ರಕರಣ ಸಂಬಂಧ ಇಲ್ಲಿಯವರೆಗೆ ಆರೋಪಿಯನ್ನು ಪತ್ತೆ ಹಚ್ಚದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಪೋಷಕರು ಹಾಗೂ ವಿವಿಧ ಸಂಘಟನೆಗಳು ಸೇರಿ ಯುವತಿ ಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಶಶಿಕುಮಾರ್ ಪ್ರತಿಕೃತಿ ದಹಿಸಿ, ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಶಿಕುಮಾರ್ ಮನೆಯವರು ನಮ್ಮ ಮಗಳನ್ನು ಮದುವೆ ಮಾಡಿಕೊಡಲು ಒತ್ತಾಯ ಮಾಡಿದ್ದರು. ಅದ್ರೆ ನಮಗೆ ಇಷ್ಟ ಇರಲಿಲ್ಲ. ಹಾಗಾಗಿ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಅವನಿಗೆ ಹಾಗೂ ಅವರ ಕುಟುಂಬಕ್ಕೆ ಶಿಕ್ಷೆಯಾಗಬೇಕು ಎಂದು ಯುಕ್ತಿ ತಾಯಿ ಹೇಮಾವತಿ ಕಣ್ಣೀರಿಟ್ಟರು.

ಪ್ರತಿಭಟನಾ ಸ್ಥಳಕ್ಕೆ ಎಎಸ್​ಪಿ ವೇಣುಗೋಪಾಲ್ ಆಗಮಿಸಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಒಬ್ಬ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ. ಆದಷ್ಟು ಬೇಗ ಆರೋಪಿಯ ಪತ್ತೆ ಹಚ್ಚುವ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಶಾರ್ಟ್​​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ವೃದ್ಧೆ ಸಾವು, ಐವರಿಗೆ ಗಂಭೀರ ಗಾಯ

Last Updated : Mar 8, 2022, 2:56 PM IST

ABOUT THE AUTHOR

...view details