ಕರ್ನಾಟಕ

karnataka

ETV Bharat / state

'ಇಂಡಿಯಾ' ಗೋಸ್ಕರ ನೀರು ಬಿಟ್ಟಿದ್ದೀರಿ : ಸಿ ಟಿ ರವಿ ವಾಗ್ದಾಳಿ

ತಮಿಳುನಾಡಿಗೆ ರಾಜ್ಯದ ಕಾವೇರಿ ನೀರು ಬಿಡುತ್ತಿರುವ ಬಗ್ಗೆ ಮಾಜಿ ಶಾಸಕ ಸಿ ಟಿ ರವಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಸಿ ಟಿ ರವಿ
ಮಾಜಿ ಸಚಿವ ಸಿ ಟಿ ರವಿ

By ETV Bharat Karnataka Team

Published : Aug 22, 2023, 3:41 PM IST

ಮಾಜಿ ಶಾಸಕ ಸಿ ಟಿ ರವಿ

ಮಂಡ್ಯ : 'ಇಂಡಿಯಾ'ಗೋಸ್ಕರ ನೀರು ಬಿಟ್ಟಿದ್ದೀರಿಎಂದುಮಾಜಿ ಸಚಿವ ಸಿ ಟಿ ರವಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ, ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನ ಹಸನು ಮಾಡಿದೆ ಎಂದರು.

ಕಾವೇರಿ ಇಲ್ಲದೆ ಬೆಂಗಳೂರು ಉಳಿಯೋಕು ಆಗಲ್ಲ. ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸ ಇದೆ. ಚುನಾವಣೆಗೂ‌ ಮುಂಚೆ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ಪಾದಯಾತ್ರೆ ಮಾಡಿದ್ರು. ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದ್ರು. ರೈತರು ಅಂದ್ರೆ ಎಲ್ಲರೂ ಒಂದೇ. ಕರ್ನಾಟಕ-ತಮಿಳುನಾಡು ಎನ್ನುವ ಭೇದಬಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಳೋಕು ಮುಂಚೆ ನೀರು ಕೊಟ್ಟಿದ್ದೀರಿ. ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದ್ರೆ ತಮಿಳುನಾಡು ಕೇಳೋಕೆ ಮುಂಚೆ ನೀರು ಬಿಟ್ಟಿದ್ದೀರಿ. ಇಂಡಿಯಾಗೋಸ್ಕರ ನೀರು ಬಿಟ್ಟಿದ್ದೀರಿ ಎಂದು ಆರೋಪಿಸಿದರು.

ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರವಾಗಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡ್ತಿದ್ದೀರಿ. ನಾಳೆ ಸರ್ವಪಕ್ಷಗಳ ಸಭೆ ಮಾಡ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು. ಹೇಗೂ ಒಂದಷ್ಟು ಜನ ಹೊಗಳು ಭಟ್ಟರನ್ನ ಇಟ್ಕೊಂಡಿದ್ದೀರಿ. ಅವರ ಬಳಿ ಸೀಲ್ ಹಾಕಿಸಿಕೊಳ್ಳೋಕೆ ಸಭೆ ಮಾಡ್ತಿದ್ದೀರಿ. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಈಗ ಸಭೆ ಮಾಡಿದ್ರೆ ಏನು ಪ್ರಯೋಜನ. ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತು. ಇದು ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಂದರು.

ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ರೆ ನೀರುಬಿಡಿ. ಆದ್ರೆ ಬರಗಾಲದಲ್ಲೂ ನೀರು ಬಿಡುವ ಅವಶ್ಯಕತೆ ಏನಿತ್ತು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅಂತ ಜಾರಿ ಮಾಡಿದ್ದೀರಿ. ಶಕ್ತಿಯೋಜನೆ, ಗೃಹಜ್ಯೋತಿ ಅಂತ ತರ್ತಿದ್ದೀರಿ. ವಾಸ್ತವಿಕವಾಗಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಆಗ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ರಾಜ್ಯಕ್ಕೆ 15-16 ಸಾವಿರ ಮೆಗಾ ವ್ಯಾಟ್ ಪವರ್ ಬೇಕು. ಆದರೆ ಇಲ್ಲಿ ಉತ್ಪಾದನೆಯೇ ಆಗ್ತಿಲ್ಲ. ಕೇವಲ 8-9ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗ್ತಿದೆ. ರಾಜ್ಯ ಕತ್ತಲಲ್ಲಿ ಮುಳುಗಿದೆ. ಆದರೆ ಉಚಿತ ಕರೆಂಟ್ ಹಾಸ್ಯಾಸ್ಪದ. ಮೊದಲು ಉತ್ಪಾದನೆ ಮಾಡಿ, ಬಳಿಕ ಉಚಿತ ವಿದ್ಯುತ್ ಕೊಡಿ.

ಕಾಂಗ್ರೆಸ್ ಕಾಲ್ಗುಣ ರಾಜ್ಯದಲ್ಲಿ ಮಳೆ ಆಗ್ತಿಲ್ಲ. ಅದು ಕಾಕತಾಳಿಯವೋ ಅಥವಾ ಪ್ರಕೃತಿಯೋ ಗೊತ್ತಿಲ್ಲ. ಮೊದಲೇ ಇವಕ್ಕೆ ದೇವರು ದಿಂಡ್ರು ಮೇಲೆ ನಂಬಿಕೆ ಇಲ್ಲ. ಮತ್ತೆ ದೇವರು ಹೇಗೆ ಮಳೆಬೆಳೆ ಕೊಡ್ತಾನೆ. ಅದು ನಂಬಿಕೆಯೋ ಅಥವಾ ಮೂಡನಂಬಿಕೆಯೋ ಗೊತ್ತಿಲ್ಲ. ದೇವರ ಮೇಲೆ ಭಯಭಕ್ತಿ ಇಲ್ಲದ ಇವರ ಕಾಲ್ಗುಣ ಇದು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರಕ್ಕೆ ಶ್ವೇತ ಪತ್ರದ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್ ಇಲ್ಲ, ಮಕ್ಕಳಿಗೆ ಮೊಟ್ಟೆ ಇಲ್ಲ. ಕೆಎಸ್ಆರ್​ಟಿಸಿ ಸಿಬ್ಬಂದಿಗೆ ಸಂಬಳವೇ ಇಲ್ಲ. ಇನ್ನು ಎಣ್ಣೆ ರೇಟ್ ಹೇಗಿದೆ ಅಂತ ಕುಡಿಯುವವರಿಗೆ ಗೊತ್ತು. ನನಗೆ ಗೊತ್ತಿಲ್ಲ. ಮಧ್ಯಮವರ್ಗದವರಿಗೆ ಈ ಸರ್ಕಾರ ಬರೆ ಮೇಲೆ ಬರೆ ಹಾಕ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ಅಂದ್ರು. ಆದರೆ ಯಾರು 200 ಯೂನಿಟ್​ಗಿಂತ ಹೆಚ್ಚು ವಿದ್ಯುತ್ ಉಪಯೋಗಿಸ್ತಿದ್ದಾರೆ ಅವರಿಗೆ ಡಬಲ್ ಬಿಲ್. ಕೈಗಾರಿಕೆಗಳಂತೂ ಉಳಿಯುವ ಸ್ಥಿತಿಯಲ್ಲೇ ಇಲ್ಲ. ಜನರನ್ನ ಸುಲಿಗೆ ಮಾಡಿ ಮತ್ತೆ ಅದನ್ನೇ ಯೋಜನೆ ಅಂತ ಅವರಿಗೆ ಕೊಡಲು ಹೊರಟಿದ್ದಾರೆ. ಮೂರು ತಿಂಗಳಲ್ಲಿ ಬಂದು ಅದ್ವಾನ ಮಾಡಿದ್ದಾರೆ. ಒಂದು ಸರ್ಕಾರಕ್ಕೆ 6 ತಿಂಗಳು ಹನಿಮೂನ್ ಫೀರಿಯಡ್ ಅಂತಾರೆ. ಆದರೆ ಸರ್ಕಾರ ಬಂದ ಕೆಲವೇ ದಿನಗಳಲ್ಲಿ ಸಚಿವರ ಮೇಲೆ ಶಾಸಕರು ಪತ್ರ ಬರೆಯುತ್ತಾರೆ. ಸಚಿವರ ಬಳಿ ಶಾಸಕರು ಹೋದ್ರೆ ದಲ್ಲಾಳಿ ಮಧ್ಯೆ ಬರ್ತಾನೆ. ಹಾಗಾಗಿ ಶಾಸಕರು ಅಸಮಾಧಾನಗೊಂಡಿದ್ದಾರೆ‌ ಎಂದರು.

ಈಗ ಜಿಲ್ಲಾವಾರು ಸಭೆ ಮಾಡಿ ಅವರನ್ನ ಸಮಾಧಾನ ಮಾಡುವ ಕೆಲಸ ಆಗ್ತಿದೆ. ಎಲ್ಲವೂ ಸರಿಯಿಲ್ಲ. ಸರ್ಕಾರ ಹಾದಿತಪ್ಪಿದೆ ಅಂತ ಹಿರಿಯ ಶಾಸಕರ ಪತ್ರ ಹೇಳ್ತಿದೆ. ಇದರ ಮಧ್ಯೆ ರಾಜ್ಯದ ರೈತರು, ಕೈಗಾರಿಕೆಗಳು, ಮಧ್ಯಮವರ್ಗದ ಜನ ಹೈರಾಣಾಗಿದ್ದಾರೆ. ಈ‌ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹೋರಾಟ ಮಾಡ್ತೀವಿ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.

ಇದನ್ನೂ ಓದಿ:'ಸರ್ಕಾರದ ರೈತ ವಿರೋಧಿ ಧೋರಣೆ': ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ; ಸಿ.ಟಿ.ರವಿ ಸೇರಿ ಹಲವರು ವಶಕ್ಕೆ

ABOUT THE AUTHOR

...view details