ಮಂಡ್ಯ: ಸುಮಲತಾ ಅಂಬರೀಶ್ ಗೌಡ್ತಿ ಅಲ್ಲ, ಆಕೆ ನಾಯ್ಡು ಎಂದು ಹೇಳುತ್ತಿರುವ ಸಂಸದ ಶಿವರಾಮೇಗೌಡರಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.
ಹಳ್ಳಿಗಳಲ್ಲಿರುವ ಹೆಣ್ಮಕ್ಕಳನ್ನು ಕೇಳಿ. ಮದುವೆ ಆದಮೇಲೆ ನೀವು ಯಾರ ಮನೆಗೆ ಸೇರ್ಕೊಳ್ತಿರಾ ಅಂತಾ ಕೇಳಿ ಎಂದು ಶಿವರಾಮೇಗೌಡರಿಗೆ ಯಶ್ ತಿರುಗೇಟು ನೀಡಿದರು.
ಅದು ಅವರ ಸಿಲ್ಲಿ ಮನಸ್ಥಿತಿ. ಯಾರೇ ವೈಯಕ್ತಿಕ ಟೀಕೆ ಮಾಡಿದ್ರೂ ತಪ್ಪು. ಇನ್ನು ಜಾತಿ ವಿಚಾರ ಇಟ್ಕೊಂಡು ಟೀಕೆ ಮಾಡೋದೂ ದೊಡ್ಡ ತಪ್ಪು. ಈ ಮಟ್ಟಕ್ಕೆ ಯಾರೂ ಇಳಿಯಬಾರದು. ರಾಜಕೀಯದಲ್ಲಿ ಯಾರೂ ಶತ್ರುವಲ್ಲ ಎಂದು ಯಶ್ ಹೇಳಿದರು.
ಈ ರೀತಿ ಹೇಳಿಕೆ ಕೊಡೋ ಎಲ್ಲರನ್ನೂ ನೋಡಿದ್ದೀವಿ. ಅಂಬರೀಶಣ್ಣ ಇದ್ದಾಗ ಅವರ ಮನೆಯಲ್ಲಿ ಇವ್ರೆಲ್ಲ ಹೇಗೇಗೆ ಇದ್ರು ಅನ್ನೋದು ಗೊತ್ತಿದೆ. ಓರ್ವ ಹೆಣ್ಣು ಮಗಳು ಹೆಜ್ಜೆ ಇಟ್ಟಿದ್ದಾರೆ. ಜನ ಡಿಸೈಡ್ ಮಾಡ್ತಾರೆ ಎಂದರು.
ಕೆ.ಆರ್. ನಗರದಲ್ಲಿ ಪ್ರಚಾರ ನಡೆಸಿದ ವಿಚಾರವಾಗಿ ನಾನಿಲ್ಲಿ ನಿಂತಿರೋದು ಸ್ನೇಹಕ್ಕಾಗಿ. ಈ ಹಿಂದೆ ಅಲ್ಲಿ ಒಬ್ಬರ ಪರ ಪ್ರಚಾರ ಮಾಡಿದ್ದೆ. ನನ್ನ ಬೆಂಬಲ ಸುಮಲತಾ ಪರವಾಗಿದೆ. ಸುಮಲತಾ ಅವರಿಗೆ ಎಲ್ಲಾ ಅರ್ಹತೆ ಇದೆ. ಸುಮಲತಾಗೆ ಎಲ್ಲಾ ಅವಕಾಶ ಇತ್ತು. ಅದರಂತೆ ಬೇರೆಡೆ ಸ್ಪರ್ಧೆ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯದಲ್ಲೇ ಸ್ಪರ್ಧಿಸಿದ್ದಾರೆ. ಸುಮಲತಾರಿಗೆ ಎಲ್ಲರೂ ಬೆಂಬಲ ನೀಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ, ಆರೋಪ ಸರಿಯಲ್ಲ ಎಂದು ರಾಕಿಂಗ್ ಸ್ಟಾರ್ ಶಿವರಾಮೇಗೌಡ ಟೀಕೆಗೆ ಪ್ರತಿಕ್ರಿಯಿಸಿದರು.
ಈ ಚುನಾವಣೆಯಲ್ಲಿ ಟೀಕಾಕಾರರಿಗೆ ಮಂಡ್ಯ ಮಹಿಳೆಯರು ಸೂಕ್ತ ಉತ್ತರ ಕೊಡಬೇಕು. ಸುಮಲತಾ ಅವರಿಗೆ ಹೋದಲ್ಲೆಲ್ಲ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ನಮ್ಮೆಲ್ಲರ ಉದ್ದೇಶ ಒಂದೇ. ಹೀಗಾಗಿ ನಾವೆಲ್ಲರೂ ಹೋರಾಟ ಮಾಡ್ತಿದ್ದೇವೆ. ಈಗ ಆಗಿರೋ ಪ್ಲಾನ್ನಂತೆ ಎಲ್ಲರೂ ಪ್ರತ್ಯೇಕವಾಗಿ ಪ್ರಚಾರ ಮಾಡ್ತಿದ್ದೀವಿ. ಮುಂದೆ ಒಟ್ಟಿಗೆ ಸೇರೋದಾದ್ರೆ ಒಟ್ಟಿಗೆ ಸೇರಿ ಪ್ರಚಾರ ಮಾಡ್ತೇವೆ ಎಂದು ಯಶ್ ಸ್ಪಷ್ಟಪಡಿಸಿದರು.