ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಇಂದು ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವ ನಡೆಯುತ್ತಿದೆ. ಐತಿಹಾಸಿಕ ಉತ್ಸವಕ್ಕೆ ಮೇಲುಕೋಟೆಯನ್ನು ನವ ವಧುವಿನಂತೆ ಸಿಂಗರಿಸಲಾಗಿದ್ದು, ವಿಶೇಷ ದೀಪಾಲಂಕಾರ ಮಾಡಲಾಗಿದೆ.
ಮಂಡ್ಯದ ಜಿಲ್ಲಾ ಖಜಾನೆಯಿಂದ ಮೇಲುಕೋಟೆ ದೇಗುಲಕ್ಕೆ ರವಾನೆಯಾಗಲಿರುವ ವೈರಮುಡಿ ಆಭರಣಗಳನ್ನು ವಿಶೇಷ ಪೊಲೀಸ್ ಭದ್ರತೆಯೊಂದಿಗೆ ಪರಕಾಯ ಮಠದ ವಾಹನದಲ್ಲಿ ರವಾನೆ ಮಾಡಲಾಗುತ್ತಿದೆ.
ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವ ಮೈಸೂರು ಮಹಾರಾಜರಿಂದ ಕೊಡುಗೆಯಾಗಿ ಬಂದಿರುವ ವಜ್ರಖಚಿತ ವೈರಮುಡಿ ಆಭರಣಗಳನ್ನು ಜಿಲ್ಲಾ ಖಜಾನೆಯ ಮೂಲಕ ಮೇಲುಕೋಟೆಗೆ ತರಲಾಗುವುದು. ಮೇಲುಕೋಟೆಗೆ ತರುವ ಮಾರ್ಗಗಳಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ವೈರಮುಡಿಯನ್ನು ಇಟ್ಟು ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ನಂತರ ಸಂಜೆ 7 ಗಂಟೆ ಸುಮಾರಿಗೆ ವೈರಮುಡಿ ಮೇಲುಕೋಟೆಗೆ ತಲುಪಿಸಲಾಗುತ್ತದೆ.
ವೈರಮುಡಿಯನ್ನು ಮಂಡ್ಯದಿಂದ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಅರ್ಚಕ ಕುಟುಂಬಗಳ ಮಧ್ಯೆ ವಾಗ್ವಾದ ಮುಂದುವರೆದಿದೆ. ಪೊಲೀಸರು, ಅಧಿಕಾರಿಗಳ ಜೊತೆ ವೈರಮುಡಿ ಕೊಂಡೊಯ್ಯಲು ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನೀಕರ ಕುಟುಂಬ ಇಂದು ವಾಗ್ವಾದ ನಡೆಸಿತು.
1ನೇ ಸ್ಥಾನೀಕರು ಪ್ರತಿವರ್ಷ ವೈರಮುಡಿ ತರುವ ಉಸ್ತುವಾರಿ ವಹಿಸಿದ್ದರು. ಕಳೆದ ಬಾರಿ ಕೋರ್ಟ್ ನಮ್ಮ ಪರ ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನೀಕರು ಪಟ್ಟು ಹಿಡಿದರು. ನಂತರ ವೈರಮುಡಿ ತರುತ್ತಿರುವ ವಾಹನ ಮುಂದೆ ಹೋಗಲು ಜಾಗ ಬಿಡುವಂತೆ ಅಧಿಕಾರಿಗಳು ಅರ್ಚಕರ ಕುಟುಂಬಕ್ಕೆ ಮನವೊಲಿಸಿ, ವೈರಮುಡಿ ವಾಹನವನ್ನು ಕಳುಹಿಸಿದರು.
ಇದನ್ನೂ ಓದಿ:ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡ ನಾಲ್ವರು ಪೊಲೀಸ್ ವಶಕ್ಕೆ