ಮಂಡ್ಯ:ವಿವಿಧ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿದ್ದು, ಸುಲಲಿತವಾಗಿ ಆಡಳಿತ ನಡೆಸುತ್ತಿದ್ದಾರೆ. ಇದರ ಜತೆ ಜಿಲ್ಲೆಯ ಸಾಮಾನ್ಯ ಮಹಿಳೆಯರು ಕೂಡ ನಾವೇನು ಕಡಿಮೆ ಇಲ್ಲ ಎಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಸಕ್ಕರೆ ನಾಡಿನ ಬೆಸ್ತರ ಜನಾಂಗದ ಮಹಿಳೆಯರು ಹುಟ್ಟು ಹಿಡಿದು ಬಲೆ ಬಿಡುವ ಮೂಲಕ ಮೀನುಗಾರಿಕೆಯಲ್ಲಿ ತೊಡಗಿ ವಿಭಿನ್ನವಾಗಿ ಮಹಿಳಾ ದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಕೆರೆಯಲ್ಲಿ ಜಿ.ಪಂ. ಹಾಗೂ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಂಗಾಪರಮೇಶ್ವರಿ ಮೀನುಗಾರರ ಸಂಘದ ಮಹಿಳೆಯರು ತಮ್ಮ ವೃತ್ತಿ ಕಾಯಕವಾದ ಮೀನುಗಾರಿಕೆಯಲ್ಲಿ ತೊಡಗಿದ್ದರು. ಪುರುಷರಿಗಿಂತ ತಾವೆನೂ ಕಮ್ಮಿ ಇಲ್ಲ ಎಂಬಂತೆ ಕೆರೆಗಿಳಿದು ಹುಟ್ಟು ಹಿಡಿದು ದೋಣಿ ಸಾಗಿಸಿ ಬಲೆಬಿಟ್ಟು ಮೀನು ಹಿಡಿಯಲು ಮುಂದಾಗಿದ್ದಾರೆ. 70 ವರ್ಷದ ವೃದ್ದೆಯು ಸಹ ಮೀನುಗಾರಿಕೆಯಲ್ಲಿ ತೊಡಗಿ ಇತರಿಗೆ ಮಾದರಿಯಾಗಿ ಕಷ್ಟದ ಜೊತೆ ಕಾಯಕದ ಸಂತಸ ವ್ಯಕ್ತಪಡಿಸಿದರು.